Advertisement
ಪಾರ್ತಿಸುಬ್ಬ ಯಕ್ಷಗಾನ ಕಲಾ ಕೇಂದ್ರ, ಕೇರಳ ತುಳು ಅಕಾಡೆಮಿ, ಅಡಿಕೆ ಬೆಳೆಗಾರರನ್ನು ಕೇರಳ ಸರಕಾರ ಮರೆತೇ ಬಿಟ್ಟಿದೆ. ಎಂಡೋ ದುರಂತದ ಸಂತ್ರಸ್ತರಿಗಾಗಿ ಕಾದಿರಿಸಿದ ನಿಧಿ ಏನೇನು ಸಾಲದು. ಈ ಮೂಲಕ ಕಾಸರಗೋಡು ಜಿಲ್ಲೆಯನ್ನು ಹಿಂದಿನಂತೆಯೇ ಈ ಬಜೆಟ್‌ನಲ್ಲೂ ಅವಗಣಿಸಲಾಗಿದೆ.
Related Articles
ಮಹಾಳಿ ಮೊದಲಾದ ರೋಗಗಳಿಂದ ತತ್ತರಿಸಿರುವ ಅಡಿಕೆ ಬೆಳೆಗಾರರಿಗೆ ರಾಜ್ಯ ಬಜೆಟ್ ನಿರಾಶೆಯನ್ನುಂಟು ಮಾಡಿದೆ. ತುರ್ತು ನೆರವಾಗಿ ಭರವಸೆ ನೀಡಿದ್ದ 2 ಕೋಟಿ ರೂ. ಯನ್ನೂ ಬಜೆಟ್‌ನಲ್ಲಿ ಕಾದಿರಿಸಿಲ್ಲ. ಅಲ್ಲದೆ ಶಾಸಕ ಕೆ.ಕುಂಞಿರಾಮನ್ ಅಡಿಕೆ ಕೃಷಿಕರಿಗೆ 20 ಕೋಟ ರೂ. ನೀಡಬೇಕೆಂದು ಆಗ್ರಹಿಸಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿಲ್ಲ. ಮಹಾಳಿ ರೋಗದಿಂದ ಕಾಸರಗೋಡು ಜಿಲ್ಲೆಯಲ್ಲಿ 7174 ಹೆಕ್ಟರ್ ಅಡಿಕೆ ಕೃಷಿ ಹಾನಿಗೀಡಾಗಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶ ನೀಡಿತ್ತು. ಈ ಕಾರಣದಿಂದ 8022 ಟನ್ ಅಡಿಕೆ ಕೊಳೆತು ಬಿದ್ದಿದೆ. ಪ್ರಾಥಮಿಕ ಅಂದಾಜಿನಂತೆ 16 ಕೋಟಿ ರೂ. ನಷ್ಟವಾಗಿದೆ. ಬೃಹತ್ ಮಟ್ಟದಲ್ಲಿ ಅಡಿಕೆ ಕೃಷಿಕರಿಗೆ ನಷ್ಟವಾಗಿದ್ದರೂ ಬಜೆಟ್‌ನಲ್ಲಿ ಚಿಕ್ಕಾಸು ನೀಡಿಲ್ಲ. ಇದು ಪ್ರತಿಭಟನೆಗೆ ಕಾರಣವಾಗಿದೆ.
Advertisement
ಎಂಡೋ ಸಂತ್ರಸ್ತರಿಗೆ ನಿರಾಶೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಬಜೆಟ್‌ನಲ್ಲಿ ಕೇವಲ 20 ಕೋಟಿ ರೂ. ಕಾದಿರಿಸಲಾಗಿದೆ. ಹಿಂದಿನ ಮೂರು ಬಜೆಟ್‌ಗಳಲ್ಲಿ 34.5 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಲ್ಲಿನ ಎಂಡೋ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಕ್ಷೇಮಕ್ಕಾಗಿ ಈ ಮೊತ್ತ ಬಳಸಲಾಗುವುದು. ಮುಳಿಯಾರಿನಲ್ಲಿ ಉದ್ದೇಶಿಸಿದ ಪುನರ್ವಸತಿ ಗ್ರಾಮ ಇದರಲ್ಲೊಳಗೊಂಡಿದೆ. ಆದರೆ ಎಂಡೋ ಮೊತ್ತ ಏನೇನು ಸಾಲದು. ಪ್ರಸ್ತಾವ ಪರಿಗಣಿಸಲಿಲ್ಲ
ಕಾಸರಗೋಡಿಗೆ 50 ಕೋಟಿ ರೂ. ಯೋಜನೆಯನ್ನು ನಿರ್ದೇಶಿಸಲು ವಿತ್ತ ಖಾತೆ ಕೇಳಿಕೊಂಡಿತ್ತು. ಅದರಂತೆ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಕನ್ನಡ ಅಕಾಡೆಮಿ ಸ್ಥಾಪನೆ, ಕಾಸರಗೋಡು ನಗರ ಅಭಿವೃದ್ಧಿ ಯೋಜನೆ, ಕೆ.ಎಂ.ಅಹಮ್ಮದ್ ಸ್ಮಾರಕ ಲೈಬ್ರೆರಿ, ಮುನ್ಸಿಪಲ್ ಸ್ಟೇಡಿಯಂ ಅಭಿವೃದ್ಧಿ ಮೊದಲಾದ ಯೋಜನೆಗಳನ್ನು ಸಲ್ಲಿಸಿದ್ದರು. ಆದರೆ ಬಜೆಟ್‌ನಲ್ಲಿ ಈ ಯಾವುದೇ ಪ್ರಸ್ತಾವವನ್ನೂ ಪರಿಗಣಿಸಿಲ್ಲ. ಶ್ವೇತಪತ್ರ ಹೊರಡಿಸಲಿ
ಎಂಡೋ ಸಂತ್ರಸ್ತರಿಗೆ ಯಾವುದೇ ಭರವಸೆ ಇಲ್ಲ. ಕಳೆದ ಬಾರಿ ಮಂಜೂರು ಮಾಡಿದ 50 ಕೋಟಿ ರೂ.ಯಲ್ಲಿ ಸಂತ್ರಸ್ತರಿಗೆ ಔಷಧಿಗೂ ಲಭಿಸಿಲ್ಲ. ಇದೀಗ ಮಂಜೂರು ಮಾಡಿದ 20 ಕೋಟಿ ರೂ. ಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಷ್ಟ ಪರಿಹಾರ ನೀಡಲು ಮತ್ತು ಪುನರ್ವಸತಿ ಗ್ರಾಮ ಕಲ್ಪಿಸಲೂ ಸಾಧ್ಯವಾಗದು. ಎಂಡೋ ಸಂತ್ರಸ್ತರು ಸೆಕ್ರೆಟರಿಯೇಟ್ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಾಹಾರ ಸತ್ಯಾಗ್ರಹ ವನ್ನು ಸರಕಾರ ಅವಗಣಿಸಿದೆ. ಈ ಹಿಂದೆ ಮಂಜೂರು ಮಾಡಿದ ಹಣವನ್ನು ಹೇಗೆ ವೆಚ್ಚ ಮಾಡಿದೆ ಎಂಬ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಬೇಕು.
– ಅಂಬಲತ್ತರ ಕುಂಞಿಕೃಷ್ಣನ್,ಪ್ರಧಾನ ಕಾರ್ಯದರ್ಶಿ,
ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ. ಮದ್ಯ,ಲಾಟರಿ ಆದಾಯ ಅವಲಂಬನೆ ಅವಮಾನಕರ
ಅತ್ಯಂತ ನಿರಾಶಾದಾಯಕ ಬಜೆಟ್. ಮಂಜೇಶ್ವರ ವಿಧಾನಸಭಾ ಕ್ಷೇತ್ರ, ಪಾರ್ತಿ ಸುಬ್ಬ ಯಕ್ಷಗಾನ ಕಲಾಕೇಂದ್ರ, ತುಳು ಅಕಾಡೆಮಿಗಳನ್ನು ಅವಗಣಿಸಲಾಗಿದೆ. ಅಡಿಕೆ ಕೃಷಿಕರಿಗೆ, ಗಡಿನಾಡ ಕನ್ನಡಿಗರಿಗೆ, ಎಂಡೋ ಪೀಡಿತರಿಗೆ ಪ್ರತ್ಯೇಕ ಸವಲತ್ತು ನೀಡಿಲ್ಲ. ಮನೆ, ವಾಹನಗಳಿಗೆ ಅಧಿಕ ತೆರಿಗೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಆಧುನಿಕ ಯುಗದಲ್ಲಿಯೂ ಮದ್ಯ, ಲಾಟರಿ ಕೇರಳದ ಆದಾಯದ ಮೂಲ ಎನ್ನುವುದು ಅವಮಾನ.
– ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ
ಬಿಜೆಪಿ ಮಂಜೇಶ್ವರ ಮಂಡಲ. ಅಭಿವೃದ್ಧಿ ಪರ ಬಜೆಟ್ : ಸಿ.ಪಿ.ಎಂ.
ರಾಜ್ಯ ಬಜೆಟ್ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಪರವಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ 91 ಕೋಟಿ ರೂ. ಕಾದಿರಿಸಿರುವುದರಿಂದ ಅಭಿವೃದ್ಧಿಗೆ ನೆರವಾಗಲಿದೆ. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ.
-ಎಂ.ವಿ. ಬಾಲಕೃಷ್ಣನ್
ಸಿಪಿಎಂ ಜಿಲ್ಲಾ ಕಾರ್ಯದರ್ಶಿ