Advertisement

ಪುಣಿಂಚತ್ತಾಯ ಜನ್ಮದಿನಕ್ಕೆ ತುಳು ಅಕಾಡೆಮಿ ಗೌರವ: ತುಳುಲಿಪಿ ದಿನವಾಗಿ ಅ. 10 ಘೋಷಣೆ

11:41 PM Oct 10, 2020 | mahesh |

ಮಂಗಳೂರು: ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯ (ಪು.ವೆಂ.ಪು.) ಅವರ ಜನ್ಮದಿನವಾದ ಅ. 10ನ್ನು ತುಳು ಲಿಪಿ ದಿನ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲಸಾರ್‌ ಅವರು ಶನಿವಾರ ಘೋಷಿಸಿದರು.

Advertisement

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಐಲೇಸಾ ಮತ್ತು ತುಳು ವರ್ಲ್ಡ್ ಕುಡ್ಲ ಆಶ್ರಯದಲ್ಲಿ ಅಕಾಡೆಮಿಯ ತುಳು ಭವನದ ಸಿರಿ ಚಾವಡಿಯಲ್ಲಿ ನಡೆದ ತುಳುಲಿಪಿ ಬ್ರಹ್ಮ ಪುಂಡೂರು ಡಾ| ವೆಂಟಕರಾಜ ಪುಣಿಂಚತ್ತಾಯ ಅವರ 84ನೇ ಜನ್ಮ ದಿನದ ಅಂಗವಾಗಿ “ಪು.ವೆಂ.ಪು. ನೋತ್ತೂಂಜಿ ನೆಂಪು’ ಮತ್ತು “ತುಳು ಲಿಪಿ ದಿನೊಕು ಲೆಪ್ಪು’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಈ ಘೋಷಣೆ ಮಾಡಿದರು.

ಪು.ವೆಂ.ಪು. ಅವರು ತುಳು ಲಿಪಿ ಬ್ರಹ್ಮ. ತುಳು ಲಿಪಿ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಅವರ ಜನ್ಮ ದಿನವನ್ನು ತುಳು ಲಿಪಿ ದಿನ ಎಂಬುದಾಗಿ ಆಚರಣೆ ಮಾಡುವುದು ಅವರಿಗೆ ನಾವು ನೀಡಬಹುದಾದ ಅತಿ ದೊಡ್ಡ ಗೌರವ ಎಂದರು.

ಹೆಮ್ಮೆಯ ದಿನ: ಯಡಪಡಿತ್ತಾಯ
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಮಾತನಾಡಿ, ತುಳು ಲಿಪಿಗೂ ಒಂದು ದಿನವನ್ನು ಗೊತ್ತು ಮಾಡಿದ ಈ ದಿನ ತುಳುನಾಡಿನ ಸಮಸ್ತ ಜನರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಹೆಮ್ಮೆಯ ದಿನವಾಗಿದೆ ಎಂದು ಹೇಳಿದರು.

ನಿಟ್ಟೆ ವಿ.ವಿ. ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ| ಸಾಯಿಗೀತಾ ಅವರು 101 ಕವಿಗಳು ಬರೆದ ಭಾವಗೀತೆ ಪುಸ್ತಕ ಬಿಡುಗಡೆಗೊಳಿಸಿದರು. ಗಾಯಕ ಕೃಷ್ಣ ಕಾರಂತ ಮತ್ತು ತುಳು ಲಿಪಿ ಸಂಶೋಧಕ ಕೃಷ್ಣಯ್ಯ ಅವರಿಗೆ ಪುವೆಂಪು ಸಮ್ಮಾನ ನೆರವೇರಿಸಲಾಯಿತು. ಕೇರಳ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಎಸ್‌. ಪುಣಿಚಂತ್ತಾಯ ಸಮ್ಮಾನಿಸಿದರು. ಡಾ| ಪಾದೆಕಲ್ಲು ವಿಷ್ಣು ಭಟ್‌ ಪು.ವೆಂ.ಪು. ನೆಂಪು ವಿಷಯದಲ್ಲಿ ಮಾತನಾಡಿದರು.

Advertisement

ಮೇಯರ್‌ ದಿವಾಕರ ಪಾಂಡೇಶ್ವರ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಾನಪದ ಪರಿಷತ್‌ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್‌, ಎಂಆರ್‌ಪಿಎಲ್‌ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ವೀಣಾ ಟಿ. ಶೆಟ್ಟಿ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ವಿಜಯರಾಜ್‌ ಪುಣಿಂಚತ್ತಾಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಡಾ| ಮಾಧವ್‌ ಎಂ. ಕೆ., ಪತ್ರಕರ್ತ ಎಸ್‌.ಆರ್‌. ಬಂಡಿಮಾರ್‌ ಮುಖ್ಯ ಅತಿಥಿಗಳಾಗಿದ್ದರು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್‌ ಶೆಟ್ಟಿ ಜೆಪ್ಪು, ಐಲೇಸಾ ಬೆಂಗಳೂರು ಸಂಚಾಲಕ ರಮೇಶ್ಚಂದ್ರ, ತುಳುವರ್ಲ್ಡ್ ಅಧ್ಯಕ್ಷ ರಾಜೇಶ್‌ ಕೃಷ್ಣ ಆಳ್ವ ಉಪಸ್ಥಿತರಿದ್ದರು. ಸದಸ್ಯ ಆಕಾಶ್‌ರಾಜ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next