Advertisement

Tulsi Gowda ಅವರಿಗೆ ಒಲಿದು ಬಂದ ಗೌರವ ಡಾಕ್ಟರೇಟ್ ಪದವಿ

09:55 PM Jun 09, 2023 | Team Udayavani |

ಅಂಕೋಲಾ: ವೃಕ್ಷಮಾತೆ ಎಂದೇ ಪ್ರಸಿದ್ಧಿಯಾಗಿ ಪದ್ಮಶ್ರೀ ಪುರಸ್ಕೃತರಾಗಿರುವ ತಾಲೂಕಿನ ಉಳುವರೆ ಮೂಲದ ಹೊನ್ನಳ್ಳಿಯ ತುಳಸಿ ಗೌಡ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಒಲಿದು ಬಂದಿದ್ದು, ಈ ಕುರಿತು ವಿ.ವಿ ವತಿಯಿಂದ ಅಧಿಕೃತ ಘೋಷಣೆ ಹೊರಡಿಸಿ, ಆಹ್ವಾನ ನೀಡಲಾಗಿದೆ.

Advertisement

ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕೃಷಿ ವಿಶ್ವವಿದ್ಯಾಲಯದ 36 ನೇ ಘಟಿಕೋತ್ಸವದ ಸಂದರ್ಭದಲ್ಲಿ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರೂ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಥಾವರಚಂದ ಗೆಹ್ಲೋಟ್ ಅವರು ಸೂಚಿಸಿದ್ದು ಜೂನ್ 16 ರಂದು ಬೆಳಿಗ್ಗೆ 11 ಘಂಟೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು.

ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೃಷಿ ಸಂಶೋಧನಾ ಹಾಗೂ ಶಿಕ್ಷಣ ವಿಭಾಗದ ಮಹಾನಿರ್ದೇಶಕ ಡಾ.ಹಾಮಾಂಶು ಪಾಠಕ್, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕುಲಪತಿ ಡಾ.ಪಿ.ಎಲ್. ಪಾಟೀಲ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲ ಸಚಿವರ ಕಾರ್ಯಾಲಯದಿಂದ ಪದ್ಮಶ್ರೀ ತುಳಸಿ ಗೌಡ ಅವರಿಗೆ ರವಾನಿಸಿರುವ ಆಹ್ವಾನ ಪತ್ರದಲ್ಲಿ ತಿಳಿಸಲಾಗಿದೆ.

ಕಾಡು ತುಳಸಿ ಕಂಪು ಈಗ ಕೃಷಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದ್ದು, ಅವರಿಗೆ ಗೌರವ ಡಾಕ್ಟರೇಟ್ ಒಲಿದು ಬಂದಿರುವುದಕ್ಕೆ ತಾಲೂಕಿನ ಹಾಗೂ ನಾಡಿನ ಹಲವು ಗಣ್ಯರು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next