Advertisement
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಬಳಿಯ ತಳುಕು ಗ್ರಾಮದವರಾದ ಇವರು ಸಾಯುವುದಕ್ಕೆ ಆರು ತಿಂಗಳು ಇರುವಾಗ ಕಳ್ಳತನ ನಡೆಯಿತು. ಮನೆಯ ಸದಸ್ಯರ ಮೈಮೇಲಿನ ಬಟ್ಟೆ ಬಿಟ್ಟರೆ ಬೇರಾವ ವಸ್ತುಗಳೂ ಇದ್ದಿರಲಿಲ್ಲ. ಕಳ್ಳತನದ ಸುದ್ದಿ ವೆಂಕಣ್ಣಯ್ಯನವರಿಗೆ ಮುಟ್ಟುವಾಗ ಎದ್ದಿರಲಿಲ್ಲ. ತತ್‌ಕ್ಷಣ ಅವರ ಉದ್ಗಾರ ಹೀಗಿತ್ತು: “ಅಯ್ಯೋ ಪಾಪ! ದೊಡ್ಡ ಪ್ರೊಫೆಸರರ ಬಂಗಲೆ ಎಂದು ಯಾರೋ ಕಳ್ಳತನಕ್ಕಾಗಿ ಬಂದಿದ್ದಾರೆ. ಅವನಿಗೆ ಇಲ್ಲೇನು ಸಿಕ್ಕೀತು? ಇಲ್ಲಿ ಹಣ, ಒಡವೆ ಇಲ್ಲದಿರುವುದನ್ನು ಕಂಡು ಇವನೆಂಥ ದರಿದ್ರ ಪ್ರೊಫೆಸರ್? ಇವನಿಗಿಂತ ನಾನೇ ವಾಸಿ ಎಂದುಕೊಂಡನೇನೋ’ ಎಂದು ಹೇಳಿ ಗಟ್ಟಿಯಾಗಿ ನಕ್ಕರಂತೆ.
Related Articles
Advertisement
****
ನಾ. ಕಸ್ತೂರಿ ಎಂದೇ ಪ್ರಸಿದ್ಧರಾದ ನಾರಾಯಣ ಕಸ್ತೂರಿ ರಂಗನಾಥ ಶರ್ಮ ಮೂಲತಃ ಕೇರಳದವರು. ಕನ್ನಡ, ಕರ್ನಾಟಕವನ್ನು ಸಿರಿವಂತಗೊಳಿಸಿದರು. ದಾವಣಗೆರೆಯಲ್ಲಿ 1949ರಲ್ಲಿ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸಮಯ ಬೆಂಗಳೂರಿಗೆ ಹೋದಾಗ ಮನೆಯಲ್ಲಿ ಕಳ್ಳತನವಾಯಿತು. ಮನೆಯನ್ನೆಲ್ಲ ನೋಡಿ ಪಡಸಾಲೆಯಲ್ಲಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಂಡಾಗ ಯಾವುದೋ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಹಾಗೆ ಕಾಣಿಸುತ್ತಿತ್ತು. ಸಹೋದ್ಯೋಗಿಗಳು, ವಿದ್ಯಾರ್ಥಿ ಸಮೂಹ ಸಮಾಧಾನ ಮಾಡುತ್ತಿದ್ದರು. “ನೀವೇನೂ ಯೋಚಿಸಬೇಡಿ ಸಾರ್, ನಾವು ಚಂದಾ ಹಾಕಿಯಾದರೂ ಆದ ನಷ್ಟವನ್ನು ಭರಿಸುತ್ತೇವೆ’ ಎಂದು ಹೇಳಿದರು.
ಕಸ್ತೂರಿಯವರು ಗಂಭೀರವದನರಾಗಿ “ನನಗಾದ ನಷ್ಟವನ್ನು ನೀವು ಭರಿಸಲು ಸಾಧ್ಯವಿಲ್ಲ. ಕಳ್ಳರು ನನ್ನ ಮರ್ಯಾದೆ ತೆಗೆಯಲೋಸುಗವೇ ಮನೆಗೆ ಬಂದಿದ್ದಾರೆ. ಕಳ್ಳರು ಬಂದವರು ಏನನ್ನೂ ಕೊಂಡೊಯ್ಯಲಿಲ್ಲ. ಕನಿಷ್ಠ ಕೆಲವು ಪುಸ್ತಕಗಳನ್ನಾದರೂ ಕೊಂಡು ಹೋಗಬಾರದಿತ್ತೆ?’ ಎಂದು ಹೇಳಿದಾಗ ಚಿಂತಿತರಾದವರು ಹೊಟ್ಟೆ ತುಂಬ ನಕ್ಕರು. ಇನ್ನೊಂದು ವಿಚಿತ್ರ ಸನ್ನಿವೇಶ ಸಂಭವಿಸಿತ್ತು. ಕಳ್ಳರು ಗಡಿಬಿಡಿಯಲ್ಲಿ ತಮ್ಮ ಪರ್ಸನ್ನು ಈ ಹಾಸ್ಯಸಾಹಿತಿ ಮನೆಯಲ್ಲಿ ಬಿಟ್ಟು ಹೋಗಬೇಕೆ? ಬಂದವರನ್ನು ಹೊಟೇಲ್‌ಗೆ ಕರೆದುಕೊಂಡು ಹೋಗಿ ಕಳ್ಳರ ಹಣದಲ್ಲಿ ತಿಂಡಿ ತಿನ್ನಿಸಿದರು.
****
ಕಳವು ನಡೆದು ಆಘಾತ ಅನುಭವಿಸುವ ಹಂತದಲ್ಲಿಯೂ ವೆಂಕಣ್ಣಯ್ಯ ಮತ್ತು ಕಸ್ತೂರಿಯವರು ಅದನ್ನು ನಗಣ್ಯವೆಂಬಂತೆ ಕಂಡದ್ದು ಅವರ ಮಾನಸಿಕ ಮಟ್ಟವನ್ನು ತೋರಿಸುತ್ತದೆ. ಎಲ್ಲರೂ ಇದನ್ನು ಪಾಲಿಸಲು ಆಗದೆ ಹೋಗಬಹುದು. ಮೇಲಿನ ಶೈಲಿಯ ಕಳ್ಳತನಕ್ಕೂ ಈಗ ಅತ್ಯಾಧುನಿಕ ರೀತಿಯಲ್ಲಿ ನಡೆಯುವ ಕಳ್ಳತನಕ್ಕೂ ಅಜಗಜಾಂತರವಿದೆ. ಪೊಲೀಸ್ ವ್ಯವಸ್ಥೆಯನ್ನೇ ಯಾಮಾರಿಸುವ ಆಧುನಿಕ ಕಳ್ಳರಿದ್ದಾರೆ. ಈಗ ಸಾಂಪ್ರದಾಯಿಕ ಕಳ್ಳತನಕ್ಕೆ ಹೆಚ್ಚಿನ ಆಕರ್ಷಣೆ ಇಲ್ಲ ಅಥವಾ ಇಂತಹವರನ್ನು ಓಬಿರಾಯನ ಕಾಲದ ಕಳ್ಳರು ಎಂದು ಅತ್ಯಾಧುನಿಕ ಕಳ್ಳರು ಮೂದಲಿಸಬಹುದು. ಆದರೆ ಈಗಿನ ಭ್ರಷ್ಟಾಚಾರಗಳನ್ನು ಕಂಡಾಗ ಹಣಸಂಗ್ರಹಕ್ಕಾಗಿ ನಾವು ಸಂಶೋಧಿಸಿದ ಕಳ್ಳಮಾರ್ಗಗಳೇ ಹೆಚ್ಚು ಹೆಚ್ಚು ಕಳ್ಳರನ್ನು ಸೃಷ್ಟಿಸುತ್ತಿದೆಯೆ ಎಂಬ ಸಂದೇಹ ಮೂಡುತ್ತದೆ. ಇಲ್ಲಿ ಕಳ್ಳಮಾರ್ಗದ ಸಂಪಾದನೆ ಮಾಡುವವನೂ ಆ ಕಳ್ಳ ಹಣವನ್ನು ಹೊಡೆಯುವವನೂ ಇಬ್ಬರೂ ಕಳ್ಳರೇ ಆಗಿರುತ್ತಾರೆ. ಕೆಲವು ಬಾರಿ ಕಾನೂನು ದೃಷ್ಟಿಯಲ್ಲಿ ಇವರಿಬ್ಬರಲ್ಲಿ ಒಬ್ಬರು ಸಕ್ರಮರೂ ಇನ್ನೊಬ್ಬರು ಅಕ್ರಮರೂ ಆಗಬಹುದು. ಎಷ್ಟೋ ಬಾರಿ ಇವರಾರೂ ಅಧಿಕೃತ ಕಳ್ಳರಾಗದೆ ಇರಬಹುದು, ಮೇಲಾಗಿ ಸಮಾಜದಲ್ಲಿ ಗಣ್ಯರ ಸಾಲಿನಲ್ಲಿ ಸ್ಥಾನವನ್ನೂ ಪಡೆಯುತ್ತಾರೆ.
ಅಕ್ರಮಗಳ ಮೂಲಕ ಹಣ ಸಂಪಾದನೆ ಮಾಡಿದಷ್ಟು ದುಡಿದು ಹಣ ಸಂಪಾದಿಸುವುದಕ್ಕೆ ಆಗುವುದಿಲ್ಲ ಎಂಬುದು ದಿಟ. ಆದರೆ ಕಳ್ಳರ ಸಂಖ್ಯೆಹೆಚ್ಚಲು ಅಕ್ರಮ ಸಂಪಾದನೆಯವರೇ ಮುಖ್ಯ ಕಾರಣ ಎಂಬ ವಾದವೂ ಇದೆ. “ಸಿಹಿ ಇದ್ದಲ್ಲಿ ಇರುವೆಗಳು ಇರುವಂತೆ’ ಇದು. ಕಳ್ಳರು ನಡೆಸುವ ಕಳ್ಳತನಕ್ಕಿಂತಲೂ ಕೂಡಿಟ್ಟ ಧನವನ್ನು ಅವರವರ ಮಕ್ಕಳೇ ಬೇರೆ ಬೇರೆ ಮಾರ್ಗಗಳಲ್ಲಿ ಖಾಲಿ ಮಾಡುವುದು ಹೆಚ್ಚು ಕಂಡುಬರುತ್ತಿದೆ. ಇದರಲ್ಲಿಯೂ ಅಕ್ರಮ ಪಟ್ಟ ಪಡೆಯದೆ ಪೋಷಕರ ಹಣವನ್ನು ತಿಂದು ತೇಗುವ ತಜ್ಞಕಳ್ಳಮಕ್ಕಳಿದ್ದಾರೆ. ಇಲ್ಲಿ “ಅಕ್ರಮ’ ಪಟ್ಟದಿಂದ ತಪ್ಪಿಸಿಕೊಂಡರೂ ನೈತಿಕವಾಗಿ ಅಕ್ರಮವೇ ಆಗಿರುತ್ತದೆ. ಪೋಷಕರು ಜಾಗರೂಕವಾಗಿರುವುದು ಅತ್ಯಗತ್ಯ, ಅಂದರೆ ನೈತಿಕ ಮಾರ್ಗದಲ್ಲಿಯೇ ಹಣ ಸಂಪಾದನೆಗೆ ಆದ್ಯತೆ ಕೊಡಬೇಕಾಗಿದೆ. ಪೋಷಕರು ಎದೆತಟ್ಟಿ ನನ್ನ ಸಂಪಾದನೆ ನೈತಿಕ ಆಧಾರದಲ್ಲಿದೆ ಎಂದು ಮಕ್ಕಳೆದುರು ಜೀವನವಿಧಾನದಲ್ಲಿ ತೋರಿಸಿಕೊಂಡಾಗ ಮಾತ್ರ (ಬಾಯಿ ಮಾತಿನಲ್ಲಿ ಅಲ್ಲ) ಮಕ್ಕಳೂ ಅದೇ ಮಾರ್ಗವನ್ನು ಅನುಸರಿಸಲು ಮಾರ್ಗದರ್ಶನ ಸಿಗಬಹುದು. ಪೋಷಕರೇ ಕಳ್ಳ ಮಾರ್ಗ ಹಿಡಿದರೆ, ಅದನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಮಕ್ಕಳೆದುರು ಪ್ರಯೋಜನಕಾರಿಯಾಗುವುದಿಲ್ಲ, ಇಂದು ತರಹೇವಾರಿ ಕಳ್ಳರು ಹೆಚ್ಚಾಗಲು ಗೊತ್ತಿಧ್ದೋ ಗೊತ್ತಿಲ್ಲದೆಯೋ ಪೋಷಕರು ಪರೋಕ್ಷ ಕಾರಣರಾಗುತ್ತಿದ್ದಾರೆನ್ನುವುದನ್ನು ಒಪ್ಪಿಕೊಳ್ಳದೆ ಅನ್ಯ ಮಾರ್ಗವಿಲ್ಲ.
-ಮಟಪಾಡಿ ಕುಮಾರಸ್ವಾಮಿ