Advertisement

ಹಂದಿಜೋಗಿಗಳ ಜಾಗ ಕಬಳಿಸಲು ಹುನ್ನಾರ:  ಹೆಚ್.ವಿಶ್ವನಾಥ್ ಗಂಭೀರ ಆರೋಪ

07:24 PM Aug 05, 2022 | Team Udayavani |

ಪಿರಿಯಾಪಟ್ಟಣ: ಪಟ್ಟಣದಲ್ಲಿ ವಾಸಿಸುತ್ತಿರುವ ಹಂದಿ ಜೋಗಿಗಳ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಅಧಿಕಾರಿಗಳು ಹತ್ತಾರು ಬಾರಿ ಪತ್ರ ಬರೆದರೂ ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ ರವರು ಮೂಲಭೂತ ಸೌಲಭ್ಯ ಕಲ್ಪಿಸಿದೆ, ಕೊಳಗೇರಿ ಅಭಿವೃದ್ಧಿ ಮಂಡಳಿಗೂ ಸೌಲಭ್ಯ ಕಲ್ಪಿಸಲು ಅವಕಾಶ ನೀಡದೆ ಭೂಗಳ್ಳರೊಂದಿಗೆ ಸೇರಿ ಹಂದಿಜೋಗಿಗಳ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

Advertisement

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೃದಯ ಭಾಗದಲ್ಲಿ ಕಳೆದ 70 ವರ್ಷಗಳಿಂದ 38 ಹಂದಿಜೋಗಿ ಕುಟುಂಬಗಳು ವಾಸಿಸುತ್ತಿದ್ದು, 2001 ರಲ್ಲಿ ಅಂದಿನ ಮೈಸೂರು ಜಿಲ್ಲಾಧಿಕಾರಿಗಳು ಈ ಜನರು ವಾಸಿಸುತ್ತಿರುವ ಈ ಪ್ರದೇಶಕ್ಕೆ ಭೇಟಿ ನೀಡಿ, ಈ ಪ್ರದೇಶವನ್ನು ಘೋಷಿತ ಕೊಳಚೆ ಪ್ರದೇಶ ಎಂದು ಘೋಷಿಸಿ 38 ಕುಟುಂಬಗಳಿಗೆ ಪುರಸಭೆ ವತಿಯಿಂದ ಹಕ್ಕುಪತ್ರ ನೀಡುವ ಮೂಲಕ ಈ ಸ್ಥಳವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿ ಪಡಿಸಿ, ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರು ಮತ್ತು ತಾಂತ್ರಿಕ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಆದರೆ ಇಲ್ಲಿನ ಪುರಸಭಾ ಅಧಿಕಾರಿಗಳು 2001 ರಿಂದ ಇಂದಿನವರೆಗೂ ತಾವೂ ಮೂಲಭೂತ ಸೌಲಭ್ಯವನ್ನು ಕಲ್ಪಿಸದೆ ಇತ್ತ ಕೊಳಗೇರಿ ಅಭಿವೃದ್ಧಿ ಮಂಡಳಿಗೂ ಅಭಿವೃದ್ಧಿ ಪಡಿಸಲು ಅವಕಾಶ ನೀಡದೆ ಭೂಗಳ್ಳರೊಂದಿಗೆ ಸೇರಿ ಜಾಗವನ್ನು ಕಬಳಿಸಲು ಸಂಚು ರೂಪಿಸಿ ಈ ಜನರನ್ನು ವಕ್ಕಲೆಬ್ಬಿಸಲು ಹೊರಟಿದ್ದಾರೆ ಇದಕ್ಕೆ ಅವಕಾಶ ಕೊಡುವುದಿಲ್ಲಎಂದರು.

ಯಾವುದೇ ಒಬ್ಬ ವ್ಯಕ್ತಿ ಸಸತ 12 ವರ್ಷಗಳ ಕಾಲ ಒಂದು ಸ್ಥಳದಲ್ಲಿ ವಾಸವಿದ್ದರೆ ಆ ಜಾಗದ ಮಾಲೀಕತ್ವಕ್ಕೆ ಆತ ಅರ್ಹರಾಗಿರುತ್ತಾನೆ. ಹಂದಿಜೋಗಿ ಕುಟುಂಬಗಳ ವಿರುದ್ಧ ಯಾರೇ ಇದ್ದರೂ ಅಂತಹವರ ವಿರುದ್ಧ ಕಾನೂನು ರೀತಿ ಹೋರಾಟ ನಡೆಸಿ ಹಂದಿ ಇವರಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದರು.

ಹಂದಿಜೋಗಿಗಳು ವಾಸಿಸುತ್ತಿರುವ 1.7 ಗುಂಟೆ ಜಾಗದಲ್ಲಿ 38 ಕುಟುಂಬಗಳಿಗೆ ಪುರಸಭಾ ವತಿಯಿಂದ ಹಕ್ಕುಪತ್ರ ನೀಡಿದ್ದರೂ 2008 ರಲ್ಲಿ ಸತ್ತಿರುವ ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಅಲ್ಲದೆ, ಮತ್ತೊಂದು ಸುಳ್ಳು ದಾಖಲೆ ಸೃಷ್ಟಿಸಿ ಅಪರಿಚಿತ ವ್ಯಕ್ತಿಯ ಹೆಂಡತಿ ನಾನೇ ಎಂದು ಒಬ್ಬ ಮಹಿಳೆಯನ್ನು ಕರೆತಂದು ಈ ಜಾಗವನ್ನು ಕಬಳಿಸಲು ಸ್ಥಳೀಯ ಕೆಲ ಪ್ರಭಾವಿ ವ್ಯಕ್ತಿಗಳ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸಲಾಗುವುದು, ಈ ಜಾಗ ಸರ್ಕಾರದ ಆಸ್ತಿ ಎಂಬುದಕ್ಕೆ ಹಂದಿಜೋಗಿ ಕುಟುಂಬಗಳ ಬಳಿ ಸೂಕ್ತ ದಾಖಲಾತಿಗಳಿದ್ದು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದು, ಶೀಘ್ರದಲ್ಲೇ ಸ್ಥಳಕ್ಕಾಗಮಿಸಿ ಅಭಿವೃದ್ಧಿಗೆ ಒತ್ತು ನೀಡಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದ್ದಾರೆ, ಪುರಸಭೆ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ ರಾಜಕೀಯ ಪ್ರೇರಿತವಾಗಿ ಈ ಸ್ಥಳ ಖಾಸಗಿ ವ್ಯಕ್ತಿಗೆ ಸೇರಿದ್ದು ಅಲ್ಲಿನ ನಿವಾಸಿಗಳಿಂದ ಖಾಸಗಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ ಹಣ ವಸೂಲಿ ಮಾಡಿ ನಿಮ್ಮ ಪರ ಹೋರಾಟ ಮಾಡುತ್ತೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ, ಅಲ್ಲಿನ ನಿವಾಸಿಗಳ ಬಳಿ ಅಷ್ಟೊಂದು ಹಣ ಹೊಂದಿಸಿಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಯುವ ಮುಖಂಡ ನೇರಳೆಕುಪ್ಪೆ ನವೀನ್ ಮಾತನಾಡಿ ಹಂದಿಜೋಗಿ ಕಾಲೊನಿ ನಿವಾಸಿಗಳಿಗೆ ಮೂಲ ಸೌಕರ್ಯ ನೀಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ, ಅವರು ವಾಸಿಸುತ್ತಿರುವ ಸ್ಥಳ ಸರ್ಕಾರದ ಆಸ್ತಿ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಖಾಸಗಿ ವ್ಯಕ್ತಿಗಳು ಕಬಳಿಸಲು ಬಿಡುವುದಿಲ್ಲ ಭೂಗಳ್ಳರಿಗೆ ಎಷ್ಟೇ ರಾಜಕೀಯ ಪ್ರಭಾವವಿದ್ದರೂ, ಯಾವುದೇ ಬೆದರಿಕೆ ಒಡ್ಡಿದರೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next