Advertisement

ವಿಷ್ಣು ರೂಪದ ಅದೃಷ್ಟದ ಕಲ್ಲೆಂದು 2 ಕೋಟಿ ರೂ. ವಂಚನೆಗೆ ಯತ್ನ

01:28 PM Mar 18, 2023 | Team Udayavani |

ಬೆಂಗಳೂರು: ಸಾಲಿಗ್ರಾಮ ಕಲ್ಲನ್ನು ವಿಷ್ಣು ರೂಪದ ಅದೃಷ್ಟದ ಕಲ್ಲೆಂದು ನಂಬಿಸಿ 2 ಕೋಟಿ ರೂ.ಗೆ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಮಹಾರಾಷ್ಟ್ರ ಮೂಲದ ಮನೋಜ್‌ (57) ಹಾಗೂ ಆದಿತ್ಯ ಸಾಗರ್‌ (37) ಬಂಧಿತರು. ಆರೋಪಿಗಳಿಂದ ಸಾಲಿಗ್ರಾಮದ 2 ಕಲ್ಲುಗಳು, ಕೆಲ ರಾಸಾಯನಿಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಗುಜರಾತಿನ ಗೋಮತಿ ನದಿಯಿಂದ ಬೆಲೆ ಬಾಳುವ ಸಾಲಿಗ್ರಾಮದ 2 ಕಲ್ಲುಗಳನ್ನು ನಗರಕ್ಕೆ ತಂದಿದ್ದ ಆರೋಪಿಗಳು, “ಇದು ವಿಷ್ಣುರೂಪದ ಅದೃಷ್ಟಕಲ್ಲು’ ಎಂದು ನಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಮಹಾರಾಷ್ಟ್ರದಿಂದ ನಗರಕ್ಕೆ ಬರುತ್ತಿದ್ದ ಆರೋಪಿಗಳು ರಾಜಾಜಿನಗರದ ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ಗೆ ಗಿರಾಕಿಗಳನ್ನು ಕರೆಸಿಕೊಂಡು 2 ಕೋಟಿ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ತಮ್ಮ ಬಳಿ ಇರುವ ಸಾಲಿಗ್ರಾಮದ ಕಲ್ಲುಗಳು ವಿಷ್ಣುರೂಪದ ಪವರ್‌ಫ‌ುಲ್‌ ಕಲ್ಲು ಎಂದು ಸಾರ್ವಜನಿಕರನ್ನು ನಂಬಿಸಲು ಕಲ್ಲಿಗೆ ಬಟ್ಟೆ ಸುತ್ತಿ ಕರ್ಪೂರ ಹಾಗೂ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಬಟ್ಟೆ ಸುಡುವುದಿಲ್ಲ ಎಂದು ತೋರಿಸುತ್ತಿದ್ದರು.

ಬಟ್ಟೆ ಸುಡದಂತೆ ಮೊದಲೇ ಅದಕ್ಕೆ ಕೆಲ ರಾಸಾಯನಿಕ ಬೆರೆಸುತ್ತಿದ್ದರು. ಈ ರೀತಿಯಾಗಿ ದೈವಶಕ್ತಿಯ ಕಲ್ಲೆಂದು ಅಮಾಯಕರಿಗೆ ಕೋಟ್ಯಂತರ ರೂ.ಗೆ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರ ತಂಡ ಗ್ರಾಹಕರ ಸೋಗಿನಲ್ಲಿ ಆರೋಪಿಗಳನ್ನು ಸಂಪರ್ಕಿಸಿತ್ತು. ಬಳಿಕ 2 ಕೋಟಿ ರೂ. ನೀಡುವುದಾಗಿ ಅವರಿದ್ದಲ್ಲಿಗೆ ತೆರಳಿ ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next