Advertisement

ಟ್ರಸ್ಟ್‌-ಪ್ರತಿಷ್ಠಾನಗಳು ಸಮಾಜ ಕೇಂದ್ರಿತವಾಗಲಿ: ಸಿ.ಟಿ. ರವಿ

10:27 AM Jan 09, 2020 | Sriram |

ಚಿತ್ರದುರ್ಗ: ನಾಡಿನ ಸಾಧಕರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳು ಸರ್ಕಾರಿ ಕೇಂದ್ರಿತವಾಗದೆ, ಅವು ಸಮಾಜ ಕೇಂದ್ರಿತವಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದರು.

Advertisement

ನಗರದ ಎಸ್‌.ನಿಜಲಿಂಗಪ್ಪ ಸ್ಮಾರಕ ಪ್ರತಿಷ್ಠಾನದಲ್ಲಿ ನಡೆದ ಪ್ರತಿಷ್ಠಾನಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನ, ಟ್ರಸ್ಟ್‌ಗಳಿಗೆ ಈವರೆಗೆ ಬಂದಿರುವ ಅನುದಾನ, ಖರ್ಚು, ವೆಚ್ಚ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಕಟ್ಟಡ, ನಿವೇಶನ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತನ ಕುರಿತು ಚರ್ಚಿಸಿದರು.

ಟ್ರಸ್ಟ್‌ಗಳಿಗೆ ಸರ್ಕಾರದ ಸಹಕಾರವಿರುತ್ತದೆ. ಆದರೆ, ಸರ್ಕಾರವೇ ತಳ್ಳಿಕೊಂಡು ಹೋಗಲು ಸಾಧ್ಯವಿಲ್ಲ. ಟ್ರಸ್ಟ್‌ಗಳು ಚಟುವಟಿಕೆ ಕೈಗೊಂಡು ಜನರನ್ನು ತಲುಪಬೇಕು. ಆ ಮೂಲಕ ಸಶಕ್ತವಾಗಬೇಕು ಎಂದರು.

ಸಭೆಯಲ್ಲಿ ಕಲೆ, ಸಾಹಿತ್ಯ, ಸಂಗೀತ ಸೇರಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್‌ಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಕಡಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಇದೇ ವೇಳೆ ಜಿಲ್ಲಾ ಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳು ಸಮಸ್ಯೆಯಲ್ಲಿವೆ. ವರ್ಷಕ್ಕೆ ಒಂದೆರಡು ಸಭೆ ನಡೆಯುವುದಿಲ್ಲ. ನಡೆದರೂ ಐದು ನಿಮಿಷದಲ್ಲಿ ಮುಗಿದು ಹೋಗುತ್ತದೆ. ಈ ರೀತಿ ಇದ್ದಾಗ ತೀರ್ಮಾನ ಅಸಾಧ್ಯ. ಹೀಗಾಗಿ, ಟ್ರಸ್ಟ್‌ ಚೌಕಟ್ಟಿನಿಂದ ಜಿಲ್ಲಾಧಿಕಾರಿಗಳನ್ನು ಹೊರಗಿಡಿ ಎಂಬ ಸಲಹೆ ಕೇಳಿ ಬಂತು.
ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಅಧ್ಯಕ್ಷ ಡಾ| ರಾಘವೇಂದ್ರ ಪಾಟೀಲ ಮಾತನಾಡಿ, ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಅನುದಾನ ಹಂಚಿಕೆ ಲೋಪ ಸರಿಪಡಿಸಿ, ಸದಸ್ಯರ ಬದಲಾವಣೆ ಮುನ್ನ ತಜ್ಞರ ಸಮಿತಿ ರಚಿಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

Advertisement

ಸಲಹೆಗಳನ್ನು ಆಲಿಸಿದ ಸಚಿವ ಸಿ.ಟಿ. ರವಿ, ಅನುದಾನ ಹೆಚ್ಚಳಕ್ಕೆ ಸಂಬಂ ಧಿಸಿದಂತೆ ಸಚಿವನಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ತಜ್ಞರ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪ್ರಶಸ್ತಿ ಮೊತ್ತಕ್ಕೆ ಮಿತಿಯಿಲ್ಲ:
ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳಿಂದ ನೀಡುವ ಪ್ರಶಸ್ತಿಗಳ ಮೊತ್ತಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕತ್ತರಿ ಹಾಕಿದೆ ಎಂಬ ಆರೋಪವನ್ನು ಸಚಿವ ಸಿ.ಟಿ. ರವಿ ತಳ್ಳಿ ಹಾಕಿದರು. ಇದೇ ವಿಚಾರಕ್ಕೆ ಸಂಬಂ ಧಿಸಿ ಟ್ರಸ್ಟ್‌ ಪದಾ ಧಿಕಾರಿಗಳ ಬಳಿಯೇ ಏನಿದು ಅನುದಾನ ಕತ್ತರಿ ವಿವಾದ ಎಂದು ಪ್ರಶ್ನಿಸಿದರು. ಸುತ್ತೋಲೆಯಲ್ಲಿ ಪ್ರಶಸ್ತಿ ಮೊತ್ತ ನಿರ್ದಿಷ್ಟವಾಗಿ ಹೇಳಿಲ್ಲ. ಆದ್ದರಿಂದ ಪ್ರಶಸ್ತಿಯ ಗರಿಷ್ಟ ಮೊತ್ತ ನಿಗದಿ ಟ್ರಸ್ಟ್‌ಗೆ ಬಿಟ್ಟ ವಿಚಾರ ಎಂದು ವಿವಾದಕ್ಕೆ ತೆರೆ ಎಳೆದರು.

28 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳು ಸಾಕಷ್ಟು ಬೆಳೆದಿವೆ. ಅಕಾಡೆಮಿಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿವೆ. ಸರ್ಕಾರದ ನೀಡುವ ಅನುದಾನದಲ್ಲಿ ಪ್ರತಿಷ್ಠಾನ ನಡೆಸುವುದು ಕಷ್ಟ.
-ಕಡಿದಾಳ್‌ ಪ್ರಕಾಶ್‌ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next