ನವ ದೆಹಲಿ : ಅಯೋಧ್ಯೆಯಲ್ಲಿನ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸದ್ಯಕ್ಕೆ ಬೆಳ್ಳಿ ಇಟ್ಟಿಗೆಯನ್ನು ದೇಣಿಗೆಯಾಗಿ ಕಳುಹಿಸಿಕೊಡಬೇಡಿ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮ ಭಕ್ತರಿಗೆ ಹೇಳಿದೆ.
ಈಗಾಗಲೇ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದ ಸುಮಾರು 400 ಕೆಜಿ ಗೂ ಹೆಚ್ಚು ಬೆಳ್ಳಿ ಇಟ್ಟಿಗೆಗಳು ಬಂದಿವೆ. ಅವುಗಳನ್ನು ಸುರಕ್ಷಿತವಾಗಿಡುವ ಬ್ಯಾಂಕ್ ಲಾಕರ್ ಗಳು ತುಂಬಿರುವ ಕಾರಣದಿಂದಾಗಿ ಟ್ರಸ್ಟ್ ರಾಮ ಭಕ್ತರಲ್ಲಿ ಈ ರೀತಿಯಾಗಿ ಮನವಿ ಮಾಡಿಕೊಂಡಿದೆ.
ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?
ದೇಶದಾದ್ಯಂತ ರಾಮ ಭಕ್ತರಿದ್ದಾರೆ. ಹಲವರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಉಪಯೋಗವಾಗಲಿ ಎಂದು ಬೆಳ್ಳಿ ಇಟ್ಟಿಗೆಗಳನ್ನು ಸೇವಾರ್ಥವಾಗಿ ಕಳುಹಿಸಿಕೊಡುತ್ತಿದ್ದಾರೆ. ಈಗ ನಮಗೆ ಅವುಗಳ ಭದ್ರತೆ ಕಷ್ಟವಾಗುತ್ತಿದೆ. ನಮ್ಮ ಬ್ಯಾಂಕ್ ಲಾಕರ್ ಭರ್ತಿಯಾಗಿದೆ. ರಾಮನಿಗೆ ಸೇವೆ ನೀಡಲಿಚ್ಛಿಸುವ ಭಕ್ತರು ಹಣದ ರೂಪದಲ್ಲಿ ದೇಣಿಗೆ ನೀಡಬಹದು. ಸದ್ಯ, ಮಂದಿರದ ಕಾರ್ಯ ಆರಂಭದ ಹಂತದಲ್ಲಿದೆ ಹಾಗಾಗಿ ಅಷ್ಟು ಬೆಳ್ಳಿ ಇಟ್ಟಿಗೆಗಳು ಸದ್ಯಕ್ಕೆ ಬೇಕಾಗಿಲ್ಲ. ಮಂದಿರ ನಿರ್ಮಾಣಕ್ಕೆ ಇನ್ನೂ ಬೆಳ್ಳಿ ಇಟ್ಟಿಗೆಗಳು ಬೇಕಾದಾಗ ಹೇಳುತ್ತೇವೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ರಾಮ ಭಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು, ಈಗಾಗಲೇ ದೇಶದಾದ್ಯಂತ ರಾಮ ಭಕ್ತರಿಂದ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಒಟ್ಟು ಮೊತ್ತ 1,511 ಕೋಟಿ ತಲುಪಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಖಜಾಂಜಿ ಸ್ವಾಮಿ ಗೋವಿಂದ ದೇವ್ ಗಿರಿ ಇತ್ತೀಚೆಗೆ ತಿಳಿಸಿದ್ದರು.
ಓದಿ : ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ