Advertisement

ನಂಬಿಸಿ ದೋಚಿದವರ ಸೆರೆ

12:28 PM Aug 02, 2018 | Team Udayavani |

ಬೆಂಗಳೂರು: ಪರಮ ದೈವಭಕ್ತಿ ಹೊಂದಿದ್ದ ಮನೆ ಮಾಲಿಕರಿಗೆ “ಬಾಬಾ ಪೂಜೆ’ ಹೆಸರಿನಲ್ಲಿ ಚಿನ್ನಾಭರಣ ದೋಚಿದ ದಂಪತಿ ಕೋಟ್ಯಂತರ ರೂ. ಆಸ್ತಿ ಸಂಪಾದಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮಿಳುನಾಡು ಮೂಲದ ಕಿರಣ್‌ ಕುಮಾರ್‌ (28) ಮತ್ತು ಈತನ ಪತ್ನಿ ರೇಷ್ಮಾ (24) ಬಂಧಿತರು.

Advertisement

ರೇಷ್ಮಾಗೆ ಇತ್ತೀಚೆಗಷ್ಟೇ ಹೆರಿಗೆಯಾಗಿದ್ದು ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಇವರಿಂದ 1.35 ಕೋಟಿ ರೂ. ಮೌಲ್ಯದ 3.37ಕೆ.ಜಿ. ಚಿನ್ನ ಹಾಗೂ ವಜ್ರದ ಆಭರಣಗಳು, 2.5 ಕೆ.ಜಿ. ಬೆಳ್ಳಿ, ಕಂಚಿನ ವಸ್ತುಗಳು, 2 ಲಕ್ಷ ರೂ. ನಗದು, ಒಂದು ಸ್ವಿಫ್ಟ್ ಕಾರು, ಬುಲೆಟ್‌ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಮಿಳುನಾಡು ಮೂಲದ ಕಿರಣ್‌ ಕುಮಾರ್‌ ಮಂಡ್ಯ ಮೂಲದ ರೇಷ್ಮಾಳನ್ನು ಕೆಲ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ. ಕಿರಣ್‌ ಕುಮಾರ್‌ ಆಟೋ ಚಾಲಕನಾಗಿದ್ದು, ರೇಷ್ಮಾ ಕೋರಮಂಗಲದ ಉದ್ಯಮಿ ಜಯಂತ್‌ ಎಂಬುವರ ಮನೆಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು.

ಜಯಂತ್‌ ಪತ್ನಿ ಯೋಗಿಣಿ ಮಹಾದೈವ ಭಕ್ತರು. ಇದನ್ನೇ ದುರುಪಯೋಗ ಪಡಿಸಿಕೊಂಡ ರೇಷ್ಮಾ, ಉದ್ಯಮಿ ಜಯಂತ್‌ ವಿದೇಶಕ್ಕೆ ಹೋದಾಗ “ನಿಮಗೆ ದೊಡ್ಡ ಗಂಡಾಂತರವಿದೆ ಇದರಿಂದ ಪಾರಾಗಲು ಮನೆಯಲ್ಲಿರುವ ಚಿನ್ನಾಭರಣಗಳನ್ನು ಇಟ್ಟು ಬಾಬಾ ಹೆಸರಿನಲ್ಲಿ ಪೂಜೆ ಮಾಡಬೇಕು. ಬಾಬಾ ನಿಮ್ಮ ಕಷ್ಟ ಪರಿಹರಿಸುತ್ತಾನೆ ಎಂದು ನಂಬಿಸಿದ್ದಳು ಎಂದು ಅವರು ತಿಳಿಸಿದರು.

ಕೋಟಿ ರೂ. ಚಿನ್ನ ಕಳವು: ಆಕೆಯನ್ನು ನಂಬಿದ ಯೋಗಿಣಿ ಪತಿ ವಿದೇಶಕ್ಕೆ ಹೋಗುವ ಮುನ್ನ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ವಜ್ರಗಳನ್ನು ತಂದು ದೇವರ ಮುಂದೆ ಇಟ್ಟು ಪೂಜೆ ನೆರವೇರಿಸಿದ್ದರು. ಈ ವೇಳೆ ಚಿನ್ನಾಭರಣ ಹಾಗೂ ನಗದು ಇಟ್ಟಿದ್ದ ಸ್ಥಳವನ್ನು ನೋಡಿಕೊಂಡಿದ್ದ ರೇಷ್ಮಾ ಹಂತ-ಹಂತವಾಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದಳು.

Advertisement

ಬಳಿಕ ಮನೆಯ ತೋಟದ ಕೆಲಸಕ್ಕೆಂದು ಬರುತ್ತಿದ್ದ ಪತಿ ಕಿರಣ್‌ಗೆ ಚಿನ್ನಾಭರಣವನ್ನು ಕೊಟ್ಟು ಕಳುಹಿಸುತ್ತಿದ್ದಳು. ಇದೇ ರೀತಿ ಕಳೆದೊಂದು ಒಂದೂವರೆ ವರ್ಷಗಳಿಂದ ಒಂದು ಕೋಟಿ ರೂ. ಚಿನ್ನಾಭರಣವನ್ನು ದಂಪತಿ ಕಳವು ಮಾಡಿದ್ದಾರೆ. ಅಲ್ಲದೆ, ಆಗಾಗ್ಗೆ ಮನೆಗೆ ಬೇಕಾದ ದಿನಸಿಗಳನ್ನು ಸಹ ಯೋಗಿಣಿ ಮೂಲಕವೇ ಪಡೆದುಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದರು.

ಬಾಬಾ ಮಂದಿರಕ್ಕೆ 15 ಲಕ್ಷ: ಈ ನಡುವೆ ತುಂಬು ಗರ್ಭಿಣಿಯಾಗಿದ್ದ ಆರೋಪಿ ರೇಷ್ಮಾ 10 ತಿಂಗಳ ಹಿಂದಷ್ಟೇ ಕೆಲಸ ತೊರೆದಿದ್ದಳು. ಆದರೂ ಮನೆ ಮಾಲಿಕರಾದ ಯೋಗಿಣಿ ಜತೆ ನಿರಂತರ ಸಂಪರ್ಕದಲ್ಲಿದ್ದಳು. ಒಮ್ಮೆ ಯೋಗಿಣಿಗೆ ಕರೆ ಮಾಡಿದ ಆಕೆ, “ನಮ್ಮ ಹೊಲದಲ್ಲಿ ಬಾಬಾನ ವಿಗ್ರಹ ಸಿಕ್ಕಿದೆ.

ಆತನಿಗೆ ದೇವಾಲಯ ನಿರ್ಮಾಣ ಮಾಡಬೇಕೆಂಬ ಪ್ರೇರಣೆಯಾಗಿದೆ. ಇದಕ್ಕಾಗಿ 15 ಲಕ್ಷ ರೂ. ಬೇಕೆಂದು ಕೇಳಿಕೊಂಡಿದ್ದಳು. ಅದರಂತೆ ಯೋಗಿಣಿ ತಮ್ಮ ಪತಿ ಜಯಂತ್‌ಗೆ ಹಣ ಕೊಡುವಂತೆ ದುಂಬಾಲು ಬಿದ್ದಿದ್ದರು. ಇದಕ್ಕೆ ನಿರಾಕರಿಸಿದ ಉದ್ಯಮಿ ಕಾರಣ ಕೇಳಿದ್ದು, ದಂಪತಿ ನಡುವೆ ಜಗಳವಾಗಿತ್ತು. ಕೊನೆಗೆ ಪತ್ನಿ ಏನಾದರೂ ಮಾಡಿಕೊಂಡರೆ ಎಂದು ಹಣ ನೀಡಲು ಜಯಂತ್‌ ಒಪ್ಪಿದ್ದರು.

ಆಟೋ ಚಾಲಕ ಕೋಟಿ ಕುಳ: ಕೋರಮಂಗಲದಲ್ಲಿ ಆಟೋ ಚಾಲಕನಾಗಿದ್ದ ಕಿರಣ್‌ಕುಮಾರ್‌ ಪತ್ನಿ ಕಳ್ಳತನ ಕೃತ್ಯಕ್ಕೆ ಸಹಕಾರ ನೀಡಿದ್ದ. ಅದರಂತೆ ಆಕೆ ಕೊಡುತ್ತಿದ್ದ ಚಿನ್ನಾಭರಣಗಳನ್ನು ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಬದಲಿಸಿ ಹೊಸ ಒಡವೆಗಳನ್ನು ಪಡೆದುಕೊಂಡಿದ್ದ.

ಇನ್ನು ಕೆಲ ಚಿನ್ನವನ್ನು ಚಿಕ್ಕಪೇಟೆ ಹಾಗೂ ಇತರೆಡೆ ಮಾರಾಟ ಮಾಡಿ ಒಂದು ಸ್ವಿಫ್ಟ್ ಡಿಸೈರ್‌ ಕಾರು, ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಅಲ್ಲದೆ ಕೋರಮಂಗಲದಲ್ಲಿ 30 ಲಕ್ಷ ರೂ. ನೀಡಿ ಒಂದು ಫ್ಲಾಟ್‌ ಅನ್ನು ಭೋಗ್ಯಕ್ಕೆ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಚಿನ್ನಾಭರಣ ಮಾಯ: ಒಂದೂವರೆ ತಿಂಗಳ ಹಿಂದೆಷ್ಟೇ ವಿದೇಶದಲ್ಲಿರುವ ಜಯಂತ್‌ ಮಕ್ಕಳು ಮನೆಗೆ ಬಂದಿದ್ದು, ಕಾರ್ಯಕ್ರಮಕ್ಕೆ ಹೋಗಲು ಚಿನ್ನಾಭರಣ ಇಟ್ಟಿದ್ದ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ಎಲ್ಲ ಒಡವೆಗಳು ಕಾಣಿಯಾಗಿದ್ದವು.

ಈ ಬಗ್ಗೆ ತಾಯಿಯನ್ನು ವಿಚಾರಿಸಿದಾಗ ಕೆಲಸದಾಕೆ ರೇಷ್ಮಾ, ಬಾಬಾ ಹೆಸರಿನಲ್ಲಿ ಚಿನ್ನಾಭರಣವನ್ನು ಪಡೆದುಕೊಂಡಿದ್ದಳು. ಪೂಜೆ ಮುಗಿದ ಬಳಿಕ ಅಲ್ಲಿಯೇ ಇಟ್ಟಿದ್ದಾಗಿ ಹೇಳಿದ್ದರು ಎಂದು ಯೋಗಿಣಿ ತಿಳಿಸಿದರು. ಇದರಿಂದ ಅನುಮಾನಗೊಂಡ ಜಂಯತ್‌ ಕೋರಮಂಗಲ ಠಾಣೆಯಲ್ಲಿ ಆಕೆ ವಿರುದ್ಧ ದೂರು ನೀಡಿದ್ದರು.

ಸಿಕ್ಕಿಬಿದ್ದ ಆರೋಪಿಗಳು: ನಗರದಲ್ಲಿ ಫ್ಲಾಟ್‌ ಹೊಂದಿದ್ದರೂ ದೂರು ದಾಖಲಾಗುತ್ತಿದ್ದಂತೆ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕಿರಣ್‌ ಕುಮಾರ್‌ ದಂಪತಿಗೆ ಕರೆ ಮಾಡಿದ ಪೊಲೀಸರು ಬಾಬಾ ಮಂದಿರ ನಿರ್ಮಾಣ ಮಾಡಲು 15 ಲಕ್ಷ ರೂ. ಕೊಡುವುದಾಗಿ ಯೋಗಿಣಿ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದರು. ನಂತರ ಮನೆಗೆ ಬರುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಮಾರಾಟ ಮಾಡಿದ ಹಣದಲ್ಲಿ ಸ್ವಿಫ್ಟ್ ಡಿಸೈರ್‌ ಕಾರು ಖರೀದಿಸಿದ್ದ ಕಿರಣ್‌ ಕುಮಾರ್‌, ಖಾಸಗಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದ. ನಿತ್ಯ ಕಂಪನಿಯ ನೌಕರರನ್ನು ಪಿಕ್‌ ಆ್ಯಂಡ್‌ ಡ್ರಾಪ್‌ ಕೊಡುತ್ತಿದ್ದ.
-ಸೀಮಂತ್‌ ಕುಮಾರ್‌ ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next