ವಾಷಿಂಗ್ಟನ್: ಉದ್ಯೋಗಿಗಳ ವಜಾ, ಮಾಸಿಕ ಶುಲ್ಕ ವಿಧಿಸುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಆದರೆ ಇವು ಯಾವುದಕ್ಕೆ ತಲೆಕೆಡಿಸಿಕೊಳ್ಳದ ಮಾಸ್ಕ್ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ, ಶನಿವಾರ ಟ್ವಿಟರ್‌ನಲ್ಲಿ ಹೊಸ ಸಮೀಕ್ಷೆಯನ್ನು ಅವರು ಆರಂಭಿಸಿದ್ದಾರೆ. “ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಬೇಕೆ?. ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಪ್ರತಿಕ್ರಿಯಿಸಿ’ ಎಂದು ಎಲಾನ್ ಮಸ್ಕ್ ಸಮೀಕ್ಷೆ ಆರಂಭಿಸಿದ್ದಾರೆ. ಜತೆಗೆ “ಜನರ ಧ್ವನಿಯು ದೇವರ ಧ್ವನಿಯಾಗಿದೆ,’ ಎಂದು ಅವರು ಬರೆದುಕೊಂಡಿದ್ದಾರೆ.
ಸಮೀಕ್ಷೆಗೆ 24 ಗಂಟೆಗಳನ್ನು ಅವರು ನಿಗದಿಪಡಿಸಿದ್ದಾರೆ. ಈಗಾಗಲೇ ಇದಕ್ಕೆ 27,81,464 ಮತಗಳು ನೋಂದಣಿಯಾಗಿವೆ. ಕ್ಯಾಪಿಟಲ್ ಹಿಲ್ ದಂಗೆಯ ಬೆನ್ನಲ್ಲೇ 2021ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್‌ನಿಂದ ಶಾಶ್ವತವಾಗಿ ನಿಷೇಧಿಸಲಾಯಿತು.
ಹೊಸ ನೀತಿಗಳು:
“ಟ್ವಿಟರ್‌ನ ಹೊಸ ನೀತಿಯು ವಾಕ್ ಸ್ವಾತಂತ್ರ್ಯವಾಗಿದೆ. ಆದರೆ ಜನರಿಗೆ ತಲುಪುವ ಸ್ವಾತಂತ್ರ್ಯವಲ್ಲ. ಋಣಾತ್ಮಕ ಅಥವಾ ದ್ವೇಷದಿಂದ ಕೂಡಿದ ಟ್ವೀಟ್‌ಗಳನ್ನು ಅಳಸಿ ಹಾಕಲಾಗುತ್ತದೆ ಮತ್ತು ಅಂಥ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಸ್ಕ್ ಬರೆದುಕೊಂಡಿದ್ದಾರೆ. ಇದೇ ವೇಳೆ, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಕಚೇರಿಗೆ ಕೆಲಸಕ್ಕೆ ಬನ್ನಿ ಎಂದು ಮಸ್ಕ್ ಎಂಜಿನಿಯರ್‌ಗಳಿಗೆ ಮತ್ತೂಮ್ಮೆ ದುಂಬಾಲು ಬಿದ್ದಿದ್ದಾರೆ. ಕುಟುಂಬಕ್ಕೆ ಸಂಬಂಧಿಸಿದಂತೆ ತುರ್ತು ಪರಿಸ್ಥಿತಿ ಇರುವವರಿಗೆ ವಿನಾಯಿತಿ ನೀಡಲಾಗುತ್ತದೆ ಎಂದೂ ಹೇಳಿಕೊಂಡಿದ್ದಾರೆ.
Related Articles