Advertisement

Trump Vs Kamala; ವಲಸಿಗರನ್ನು ವಿರೋಧಿಸುವ ಟ್ರಂಪ್‌ ವಿರುದ್ಧ ವಲಸಿಗರ ಪುತ್ರಿ ಸಡ್ಡು!

12:41 AM Aug 05, 2024 | Team Udayavani |

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಈಗ ಕಣ ಕಾವೇರುತ್ತಿದೆ. ರಿಪಬ್ಲಿಕ್‌ನ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹತ್ಯೆ ಪ್ರಯತ್ನ ನಡೆದ ಬೆನ್ನಲ್ಲೇ ಹಾಲಿ ಅಧ್ಯಕ್ಷ ಜೋ ಬೈಡೆನ್‌ ನಾಟಕೀಯವಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಉಪಾಧ್ಯಕ್ಷೆಯೂ ಆಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಈಗ ಡೆಮಾಕ್ರಟಿಕ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳ ಪರಿಚಯ, ಗೆಲುವಿನ ಸಾಧ್ಯತೆಗಳು, ದೌರ್ಬಲ್ಯ ಮತ್ತಿತರ ವಿಚಾರಗಳ ಅವಲೋಕನ ಇಲ್ಲಿದೆ.

Advertisement

ಹಿಂದೆ ಸರಿದ ಬೈಡೆನ್‌: ಬದಲಾದ ಕಣ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಹಾಲಿ ಹಾಗೂ ಮಾಜಿ ಅಧ್ಯಕ್ಷರ ನಡುವೆ ಜಟಾಪಟಿ ಏರ್ಪಡಲಿದೆ ಎಂದುಕೊಂಡಿದ್ದವರ ನಿರೀಕ್ಷೆ ಸುಳ್ಳಾಗಿದ್ದು, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿದ್ದ ಜೋ ಬೈಡೆನ್‌ ಸ್ಪರ್ಧೆಯಿಂದಲೇ ಹಿಂದೆ ಸರಿದರು. ತಮ್ಮ ಆರೋಗ್ಯ ಸಮಸ್ಯೆ ಹಾಗೂ ವಯಸ್ಸಿನ ಕಾರಣದಿಂದಾಗಿ ಬೈಡೆನ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾಗಿ ಖುದ್ದು ಹೇಳಿದ್ದಾರೆ. ಒಂದು ವೇಳೆ ಬೈಡೆನ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಮಾಜಿ ಹಾಗೂ ಹಾಲಿಗಳ ನಡುವಿನ 7ನೇ ಮುಖಾಮುಖೀಯಾಗಲಿತ್ತು. ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಸೇರಿ ಹಲವು ಡೆಮಾಕ್ರಟಿಕ್‌ ಪಕ್ಷದ ನಾಯಕರ ಮನವಿ ಮೇರೆಗೆ ಬೈಡೆನ್‌ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ದಾರಿ ಮಾಡಿಕೊಟ್ಟಿದ್ದಾರೆ.

ಕಮಲಾರಿಗೆ ಹರಿದುಬರುತ್ತಿರುವ ನಿಧಿ
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಈಗ ಡೆಮಾಕ್ರಟಿಕ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಅವರನ್ನು ಎದುರಿಸಲಿದ್ದಾರೆ. ರಾಜಕಾರಣದಿಂದ ದೂರ ಸರಿದರೂ ಡೆಮಾಕ್ರಟಿಕ್‌ ಪಕ್ಷದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿರುವ ಬರಾಕ್‌ ಒಬಾಮಾ ಅವರೂ ಕಮಲಾರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಕಮಲಾ ಅವರ ಅಭ್ಯರ್ಥಿತನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಿಧಿ ಕೂಡ ಹರಿದು ಬಂದಿದೆ. ಅಭ್ಯರ್ಥಿ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಇವರಿಗೆ ನೆರವಿನ ಮಹಾಪೂರ ಹರಿದುಬಂದಿದೆ. ಜುಲೈ ತಿಂಗಳೊಂದರಲ್ಲೇ ಇವರಿಗೆ 310 ದಶಲಕ್ಷ ಡಾಲರ್‌ ನೆರವು ಬಂದರೆ, ಟ್ರಂಪ್‌ಗೆ 139 ದಶಲಕ್ಷ ಡಾಲರ್‌ ನೆರವು ಬಂದಿದೆ. ವಿಶೇಷ ಎಂದರೆ, ವಲಸಿಗರ ವಿರೋಧಿ ನೀತಿ ಅನುಸರಿಸುವ ಟ್ರಂಪ್‌ ವಿರುದ್ಧ ಅದೇ ವಲಸಿಗರ ಪುತ್ರಿಯೇ ಟಕ್ಕರ್‌ ನೀಡಲು ಮುಂದಾಗಿದ್ದಾರೆ!

ಮೊದಲ ಮಹಿಳಾ ಅಧ್ಯಕ್ಷೆ ಆಗ್ತಾರಾ?
ಅಮೆರಿಕ ಈವರೆಗೆ 46 ಅಧ್ಯಕ್ಷರನ್ನು ಕಂಡಿದೆ. ಅಂದರೆ 1789ರಿಂದ ಈವರೆಗೂ ಯಾವುದೇ ಮಹಿಳೆಗೆ ಅಮೆರಿಕ ಅಧ್ಯಕ್ಷ ಪಟ್ಟ ಸಿಕ್ಕಿಲ್ಲ! ಈ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರೂ ಗೆಲುವು ದಕ್ಕಿಲ್ಲ. ಇದೀಗ ಕಮಲಾ ಅವರು ಟ್ರಂಪ್‌ ವಿರುದ್ಧ ಗೆಲುವು ಸಾಧಿಸಿದರೆ ಐತಿಹಾಸಿಕ ಗೆಲುವಾಗಲಿದೆ. ಇತ್ತ, ಡೊನಾಲ್ಡ್  ಟ್ರಂಪ್‌ ಅವರ ಮೇಲೆ ಹತ್ಯೆ ಯತ್ನ ಆದ ಬಳಿಕ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚುತ್ತಲಿದ್ದರೂ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಬದಲಾದ ಬೆನ್ನಲ್ಲೇ ಸಮೀಕರಣಗಳು ಕೂಡ ಮತ್ತೆ ಬದಲಾಗುತ್ತಿವೆ.

ಮೊದಲ ಕಪ್ಪು ಮಹಿಳಾ ಅಭ್ಯರ್ಥಿ!
ವೃತ್ತಿಯಲ್ಲಿ ವಕೀಲೆಯಾಗಿರುವ ಕಮಲಾ ದೇವಿ ಹ್ಯಾರಿಸ್‌ ಪ್ರಸ್ತುತ ಅಮೆರಿಕದ ಉಪಾಧ್ಯಕ್ಷೆಯಾಗಿದ್ದಾರೆ. ದೇಶದ ಪ್ರಥಮ ಮಹಿಳಾ ಉಪಾಧ್ಯಕ್ಷೆ! ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನ‌ಲ್ಲಿ ಹುಟ್ಟಿ ಅಲ್ಲೇ ಬದುಕಿದ್ದರೂ, ಅವರ ತಾಯಿ ಶ್ಯಾಮಲಾ ಗೋಪಾಲನ್‌ ಅವರ ಮೂಲ ಭಾರತ ಆಗಿರುವುದರಿಂದ ಕಮಲಾರಿಗೆ ಭಾರತದ ಜತೆ ನಂಟಿದೆ. ಇನ್ನು ಕಮಲಾ ತಂದೆ ಡೊನಾಲ್ಡ್‌ ಜೆ. ಹ್ಯಾರಿಸ್‌ ಜಮೈಕಾ ಮೂಲದವರಾದ್ದರಿಂದ ಕಮಲಾ ಕಪ್ಪು ವರ್ಣೀಯರೂ ಹೌದು. ಇದರೊಂದಿಗೆ ಭಾರತೀಯ ಮೂಲದ ಮೊದಲ ಮಹಿಳಾ ಅಭ್ಯರ್ಥಿಯಾಗಿರುವ ಕಮಲಾ ಗೆಲವು ಪಡೆದರೆ ಮೊದಲ ಮಹಿಳಾ ಅಧ್ಯಕ್ಷೆ ಅಷ್ಟೇ ಅಲ್ಲದೇ ಮೊದಲ ಭಾರತೀಯ ಮೂಲದ ಮಹಿಳಾ ಅಧ್ಯಕ್ಷೆ, ಕಪ್ಪು ವರ್ಣೀಯ ಮೊದಲ ಮಹಿಳಾ ಅಧ್ಯಕ್ಷೆಯೂ ಆಗಲಿದ್ದು ಹಲವಾರು ದಾಖಲೆ ಬರೆಯಲಿದ್ದಾರೆ.

Advertisement

ಕಮಲಾ ವಿರುದ್ಧ ಟ್ರಂಪ್‌ “ಕಪ್ಪು’ ಹೋರಾಟ
ವೈಯಕ್ತಿಕ ದಾಳಿಯಲ್ಲಿ ಭಾರತೀಯ ರಾಜಕಾರಣಿಗಳನ್ನು ಮೀರಿಸುವಂತೆ ಅಮೆರಿಕ ಅಧ್ಯಕ್ಷ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಗಳು ಒಬ್ಬರನ್ನೊಬ್ಬರು ಟೀಕಿಸುವುದು ಸಾಮಾನ್ಯವಾಗಿದೆ. ಅಂತೆಯೇ ಟ್ರಂಪ್‌ ಇತ್ತೀಚೆಗೆ ಕಮಲಾ ಭಾರತೀಯಳ್ಳೋ? ಕಪ್ಪು ವರ್ಣೀಯಳ್ಳೋ? ನನಗೆ ತಿಳಿಯುತ್ತಿಲ್ಲ ಎಂದು ಹೇಳಿ ಜನಾಂಗೀಯ ನಿಂದನೆಯ ಆರೋಪ ಎದುರಿಸುತ್ತಿದ್ದಾರೆ. ಟ್ರಂಪ್‌ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಕಮಲಾ ಈ ಹಿಂದಿನಿಂದಲೂ ತಾನು ಭಾರತೀಯಳು ಎನ್ನುತ್ತಿದ್ದರು. ಭಾರತೀಯ ಸಂಸ್ಕೃತಿಯನ್ನೇ ಪ್ರಚಾರ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದ ಹಾಗೆ ತಾನು ಕಪ್ಪು ವರ್ಣೀಯಳು ಎಂದರು. ಈಗ ಆಕೆಗೆ ಕಪ್ಪು ವರ್ಣದವರಾಗಬೇಕಿದೆ. ಹಾಗಾಗಿ ನನಗೆ ಆಕೆ ಭಾರತೀಯಳ್ಳೋ? ಕಪ್ಪು ವರ್ಣೀಯಳ್ಳೋ ತಿಳಿಯುತ್ತಿಲ್ಲ’ ಎಂದಿದ್ದರು. ಟ್ರಂಪ್‌ ಈ ಹೇಳಿಕೆಗೆ ಆಕ್ರೋಶ ಭುಗಿಲೆದ್ದಿದೆ. ಇದು ಅವರ ಗೆಲುವಿಗೆ ತೊಡಕಾಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಕಮಲಾ ಗೆಲ್ಲುವ ಸಾಧ್ಯತೆ ಇದೆಯಾ?
59 ವರ್ಷ ವಯಸ್ಸಿನ ಕಮಲಾ ಹ್ಯಾರಿಸ್‌ 78 ವರ್ಷದ ಟ್ರಂಪ್‌ಗೆ ಹಲವು ವಿಚಾರದಲ್ಲಿ ಸವಾಲೊಡ್ಡಬಲ್ಲರು. ನಿಧಾನವಾಗಿ ಮಹಿಳಾ ಮತದಾರರ ಒಲವು ಕಮಲಾ ಹ್ಯಾರಿಸ್‌ ಅವರತ್ತ ವಾಲುತ್ತಿದೆ. ಈಗಾಗಲೇ ಹಲವು ಸಮೀಕ್ಷೆಗಳು ಹೇಳಿರುವಂತೆ ಬೈಡೆನ್‌ಗಿಂತಲೂ ಕಮಲಾ ಹ್ಯಾರಿಸ್‌ ಅವರೇ ಟ್ರಂಪ್‌ ವಿರುದ್ಧ ನಿಲ್ಲಲು ಸಮರ್ಥರು ಅನ್ನೋದು ಸಾಬೀತಾಗಿದೆ. ಸೆಪ್ಟಂಬರ್‌ ತಿಂಗಳಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣ ಅಭ್ಯರ್ಥಿಗಳ ಸಂವಾದದಲ್ಲಿ ಒಂದು ವೇಳೆ ಟ್ರಂಪ್‌ ಅವರಿಗೆ ಕಮಲಾ ಹ್ಯಾರಿಸ್‌ ಮುಖಾಮುಖೀಯಾದರೆ ಆಗ ಅವರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ.

ಸಮೀಕ್ಷೆಗಳಲ್ಲಿ ಟ್ರಂಪ್‌ಗೆ ಹಿನ್ನಡೆ?
ಬೈಡೆನ್‌ ಅಭ್ಯರ್ಥಿಯಾಗಿದ್ದಾಗ ಟ್ರಂಪ್‌ ಸಮೀಕ್ಷೆಗಳಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಕಮಲಾ ಅಧಿಕೃತ ಅಭ್ಯರ್ಥಿ ಆಗುತ್ತಿದ್ದಂತೆ ಸಮೀಕ್ಷೆಗಳಲ್ಲಿ ತುಸು ಹಿನ್ನಡೆ ಕಂಡಿದ್ದಾರೆ. ಟ್ರಂಪ್‌ಗೆ ಶೇ.42ರಷ್ಟು ಅಂಕ ಸಿಕ್ಕಿದ್ದರೆ, ಕಮಲಾಗೆ ಶೇ.44 ರಷ್ಟು ಅಂಕ ಸಿಕ್ಕಿವೆ. ಇಬ್ಬರ ನಡುವೆ ಶೇ.2 – 3 ರಷ್ಟು ಅಂತರವಿದೆ. ಜುಲೈ 15, 16 ರಂದು ನಡೆದಿದ್ದ ಸರ್ವೇ ವೇಳೆ ಇಬ್ಬರೂ ತಲಾ ಶೇ. 44 ಅಂಕ ಪಡೆದು ಸಮಬಲ ಸಾಧಿಸಿದ್ದರು.

ಇಬ್ಬರು ಅಭ್ಯರ್ಥಿಗಳ ಶಕ್ತಿ
ಟ್ರಂಪ್‌
ಒಮ್ಮೆ ಅಧ್ಯಕ್ಷರಾಗಿ ಅನುಭವವಿರುವ ಟ್ರಂಪ್‌ ಮೇಲೆ ಕೆಲವು ಮೂಲ ಅಮೆರಿಕನ್ನರಿಗೆ ಭರವಸೆಯಿದೆ.
ಹಾಲಿ ಅಧ್ಯಕ್ಷ ಜೋ ಬೈಡೆನ್‌ ಆಡಳಿತ ವೈಫ‌ಲ್ಯಗಳನ್ನು ಪ್ರಚಾರದ ದಾಳವಾಗಿಸಿಕೊಂಡಿರುವ ಟ್ರಂಪ್‌
ಚುನಾವಣ ಪ್ರಚಾರದ ವೇಳೆ ಟ್ರಂಪ್‌ ಮೇಲಾದ ಹತ್ಯೆಯ ಪ್ರಯತ್ನದಿಂದ ಹೆಚ್ಚಿದ ಜನಪ್ರಿಯತೆ ಹಾಗೂ ಅನುಕಂಪ

ಕಮಲಾ
ಕಪ್ಪು ವರ್ಣೀಯ ಜನಾಂಗದವರು ಕಮಲಾ ಮೇಲಿಟ್ಟಿರುವ ನಂಬಿಕೆ ಹಾಗೂ ವ್ಯಾಪಕ ಬೆಂಬಲ ಸಾಧ್ಯತೆ
ಜನಪ್ರಿಯ ಅಧ್ಯಕ್ಷ ಬರಾಕ್‌ ಒಬಾಮಾರಿಂದ ಹಿಡಿದು ಹಲವಾರು ಪ್ರಮುಖರಿಂದ ಪ್ರಚಾರ, ಬೆಂಬಲ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಮಲಾ ಜನಪ್ರಿಯತೆ, ಮೂಲತಃ ವಕೀಲೆಯಾದ ಕಾರಣ ರಾಜಕೀಯ ಜಾಣ್ಮೆ

ಇಬ್ಬರು ನಾಯಕರ ದೌರ್ಬಲ್ಯ
-ಟ್ರಂಪ್‌ ವಿರುದ್ಧ ಅತ್ಯಾಚಾರ ಸೇರಿ ಹಲವು ಪ್ರಕರಣಗಳು ಮತ್ತು ದೋಷಿ
-ಕಪ್ಪು ವರ್ಣೀಯರ ಮೇಲಿನ ನಿರ್ಲಕ್ಷ್ಯ, ಜನಾಂಗೀಯ ನಿಂದನೆ ಆರೋಪ
-ಹಿಂದಿನ ಆಡಳಿತದಲ್ಲಿ ತೆಗೆದುಕೊಂಡ ಕೆಲವು ಹುಚ್ಚುತನದ ನಿರ್ಣಯಗಳು
-ಮೇಲ್ನೋಟಕ್ಕೆ ಟ್ರಂಪ್‌ ವಿರುದ್ಧ ದುರ್ಬಲ ಅಭ್ಯರ್ಥಿ ಎಂಬ ಭಾವನೆ
-ರಿಪಬ್ಲಿಕ್‌ ಅಭ್ಯರ್ಥಿ ಟ್ರಂಪ್‌ಗಿರುವಷ್ಟು ಜನಪ್ರಿಯತೆ ಇಲ್ಲದಿರುವುದು
-ಉಪಾಧ್ಯಕ್ಷೆಯಾಗಿ ಅಂಥ ಗಮನ ಸೆಳೆಯುವ ಕೆಲಸಗಳಿಲ್ಲ ಎಂಬ ಆರೋಪ

-ತೇಜಸ್ವಿನಿ ಸಿ. ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next