Advertisement

ಟ್ರಂಪ್‌ ಭಾರತ ಪ್ರವಾಸ: ಪ್ರಮುಖ ಒಪ್ಪಂದಗಳಾಗಲಿವೆಯೇ?

10:24 AM Feb 14, 2020 | sudhir |

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ತಿಂಗಳ 24-25ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಈ ಭೇಟಿಯನ್ನು ಉಭಯ ದೇಶಗಳ ವ್ಯಾಪಾರ ಪರಿಣತರು “ಅತಿ ಮುಖ್ಯ’ವೆಂದು ಬಣ್ಣಿಸುತ್ತಿದ್ದಾರೆ. ಆದರೆ ನಿಜಕ್ಕೂ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ಗಮನಾರ್ಹ
ಸುಧಾರಣೆಗಳಾಗಬಹುದೇ ಎನ್ನುವ ಪ್ರಶ್ನೆಗೆ ಮಾತ್ರ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಟ್ರಂಪ್‌ ಕೂಡ “ಭಾರತದ ವ್ಯಾಪಾರ ಒಪ್ಪಂದವು ಸರಿಯಾಗಿದ್ದರೆ ಮಾತ್ರ ಅದಕ್ಕೆ ಸಹಿ ಹಾಕುತ್ತೇನೆ’ ಎಂದಿದ್ದಾರೆ. ಆದರೂ ವ್ಯಾಪಾರ, ರಕ್ಷಣೆ, ಮಾಹಿತಿ- ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು
ಅಡತಡೆಗಳನ್ನು ನಿವಾರಿಸಿಕೊಳ್ಳಲು, ಹೂಡಿಕೆ ಹೆಚ್ಚಿಸಲು ಈ ಭೇಟಿ ದಾರಿಮಾಡಿಕೊಡಬಹುದು ಎನ್ನುವ ನಿರೀಕ್ಷೆಯಂತೂ ಇದೆ. ಈ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ವಾಣಿಜ್ಯ ಇಲಾಖೆಗಳು ಸೂಕ್ತ ತಯಾರಿಯನ್ನಂತೂ ನಡೆಸಿವೆ. ಹಲವು ಕರಾರುಗಳನ್ನು, ನಿರೀಕ್ಷೆಗಳನ್ನು ಸಿದ್ಧಪಡಿಸಿಕೊಂಡಿವೆ.

Advertisement

ಭಾರತವು ಅಮೆರಿಕದ ಪ್ರಮುಖ ವ್ಯಾಪಾರ ರಾಷ್ಟ್ರವಾಗಿದ್ದರೂ ಕಳೆದೆರಡು ವರ್ಷಗಳಿಂದ ಎರಡೂ ರಾಷ್ಟ್ರಗಳ ನಡುವೆ ಅನೇಕ ಕಾರಣಗಳಿಗಾಗಿ
ಭಿನ್ನಾಭಿಪ್ರಾಯ ಮೂಡಿದೆ. “ಭಾರತ ತನ್ನ ಉತ್ಪನ್ನಗಳ ಮೇಲೆ ಅತಿ ಎನ್ನಿಸುವಷ್ಟು ಆಮದು ಸುಂಕ, ತೆರಿಗೆ ವಿಧಿಸುತ್ತದೆ’ ಎನ್ನುವುದು ಟ್ರಂಪ್‌ ಸರ್ಕಾರದ ಅಸಮಾಧಾನ. ಇನ್ನೊಂದೆಡೆ ಅಮೆರಿಕದ ಯುದ್ಧ ನೀತಿಗಳು (ಮುಖ್ಯವಾಗಿ ಇರಾನ್‌ ಜತೆಗೆ) ಮತ್ತು ವ್ಯಾಪಾರ ನೀತಿಗಳು ಭಾರತಕ್ಕೂ ಹಲವು ವಿಘ್ನಗಳನ್ನು ಉಂಟುಮಾಡಿವೆ. ಸದ್ಯಕ್ಕೆ ಚೀನಾದೊಂದಿಗೆ ವ್ಯಾಪಾರ ಯುದ್ಧ ನಡೆಸುತ್ತಿರುವ ಅಮೆರಿಕಕ್ಕೆ ಏಷ್ಯಾದಲ್ಲಿ ಭಾರತದ ಸಹಭಾಗಿತ್ವದ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ. ಇದೇ ವರ್ಷದ ನವೆಂಬರ್‌ ತಿಂಗಳಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ತಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಭಾರತೀಯರನ್ನು ಸೆಳೆಯುವುದು ಕೂಡ ಟ್ರಂಪ್‌ರ ಪ್ರಮುಖ ಅಜೆಂಡಾ ಆಗಿದೆ.

ಅಜೆಂಡಾದಲ್ಲಿ ಏನೇನಿದೆ?
– ವ್ಯಾಪಾರ ಒಪ್ಪಂದದಲ್ಲಿನ ಬಿಕ್ಕಟ್ಟುಗಳನ್ನು ಸರಿಪಡಿಸಿಕೊಳ್ಳುವುದು, ಮುಖ್ಯವಾಗಿ ಎರಡೂ ರಾಷ್ಟ್ರಗಳು 2018 – 2019ರಿಂದೀಚೆಗೆ ಪರಸ್ಪರರ ಉತ್ಪನ್ನಗಳ ಮೇಲೆ ಹೇರಿರುವ ಆಮದು ಸುಂಕವನ್ನು ಕಡಿಮೆ ಮಾಡುವುದು.

– ಇರಾನ್‌ ಮೇಲಿನ ಅಮೆರಿಕದ ನಿರ್ಬಂಧದಿಂದ ಭಾರತಕ್ಕೆ ಎದುರಾಗಿರುವ ತೊಂದರೆಯನ್ನು ಸರಿಪಡಿಸುವುದು.

– ಬಾಹ್ಯಾಕಾಶ, ಭದ್ರತೆ ಮತ್ತು ಮಿಲಿಟರಿ ಸಹಕಾರ ಹೆಚ್ಚಳಕ್ಕೆ ಪೂರಕವಾದ ಒಪ್ಪಂದಗಳು.

Advertisement

– ವಲಸೆ ಮತ್ತು ಎಚ್‌1ಬಿ ವೀಸಾ ಸೇರಿದಂತೆ ಇನ್ನಿತರ ಬಿಕ್ಕಟ್ಟುಗಳ ಶಮನ.

ಸುಂಕಕ್ಕೆ ಅಸಮಾಧಾನ
ಅಮೆರಿಕದ ಮಾಹಿತಿ ತಂತ್ರಜ್ಞಾನದ ಉತ್ಪನ್ನಗಳು ಹಾಗೂ ಮೊಬೈಲ್‌ಗಳ ಮೇಲಿನ ಆಮದು ಸುಂಕವನ್ನು ತಗ್ಗಿಸುವಂತೆ ಹಾಗೂ ಭಾರತದ ಮಾರುಕಟ್ಟೆಯಲ್ಲಿ ತನ್ನ ಡೈರಿ ಉತ್ಪನ್ನಗಳಿಗೆ ಸ್ಥಳ ನೀಡುವಂತೆ ಅಮೆರಿಕ ಭಾರತವನ್ನು ಒತ್ತಾಯಿಸುತ್ತಲೇ ಬಂದಿದೆ. ಇನ್ನು, ಹಾರ್ಲಿ ಡೇವಿಡ್‌ಸನ್‌ ಬೈಕುಗಳ ಮೇಲಿನ ಆಮದು ತೆರಿಗೆಯನ್ನೂ ಭಾರತ ಗಣನೀಯವಾಗಿ ತಗ್ಗಿಸಬೇಕು ಎಂದು ಟ್ರಂಪ್‌ ಆಗ್ರಹಿಸುತ್ತಾ ಬಂದಿದ್ದಾರೆ. ಈ ಹಿಂದೆ ಹಾರ್ಲಿಡೇವಿಡ್‌ಸನ್‌ ಬೈಕ್‌ ಖರೀದಿಸುವವರು 100 ಪ್ರತಿಶತ ತೆರಿಗೆ ಕಟ್ಟಬೇಕಿತ್ತು, ಈಗ ಈ ಪ್ರಮಾಣವನ್ನು ಭಾರತ 50 ಪ್ರತಿಶತಕ್ಕೆ ಇಳಿಸಲಾಗಿದೆಯಾದರೂ, ಇದೂ ಕೂಡ ಅತಿಯಾಯಿತು ಎಂದು ಅಮೆರಿಕ ದೂರುತ್ತದೆ. ಭಾರತದ ಈ ತೆರಿಗೆ ದರಗಳನ್ನು ದೂಷಿಸುತ್ತಾ ಟ್ರಂಪ್‌, ಭಾರತವು “tariff king’ ಎಂದೂ ಹಂಗಿಸಿದ್ದರು. ಇನ್ನು ಭಾರತವು ತನ್ನ ಮೆಡಿಕಲ್‌ ಉತ್ಪನ್ನಗಳ ಮೇಲಿನ ದರ ಮಿತಿಯನ್ನು ತೆಗೆದುಹಾಕಬೇಕು ಎಂಬುದೂ ಅಮೆರಿಕದ ಬಹುದಿನದ ಬೇಡಿಕೆಯಾಗಿದೆ. ಆದರೆ, ಭಾರತ ಇದಕ್ಕೆ ಸಿದ್ಧವಿಲ್ಲ. ಭಾರತೀಯರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಪರಿಕರಗಳನ್ನು ಪೂರೈಸುವುದು ಮೋದಿ ಸರ್ಕಾರದ ಗುರಿಯಾಗಿರುವುದು ಇದಕ್ಕೆ ಕಾರಣ.

18 ಸಾವಿರ ಕೋಟಿ ಒಪ್ಪಂದಕ್ಕೆ ಭಾರತ ಸಜ್ಜು?
ಮುಂದಿನ ಕೆಲವು ವರ್ಷಗಳಿಗೆ ಭಾರತದ ಮಿಲಿಟರಿ ವ್ಯಾಪಾರ ಗುರಿಯು 25 ಬಿಲಿಯನ್‌ ಡಾಲರ್‌ಗಳಷ್ಟಿದ್ದು, ಈಗಾಗಲೇ ಅಮೆರಿಕದಿಂದ 18 ಶತಕೋಟಿ ಡಾಲರ್‌ಗಳಷ್ಟು ರಕ್ಷಣಾ ಸಾಮಗ್ರಿಗಳನ್ನು, ತಂತ್ರಜ್ಞಾನವನ್ನು ಖರೀದಿ ಮಾಡಿದೆ. ಈಗ ಅಮೆರಿಕದ ಲಾಕ್‌ ಹೀಡ್‌ ಮಾರ್ಟಿನ್‌ ಕಂಪೆನಿಯೊಂದಿಗೆ ಭಾರತ ಮಾಡಿ ಕೊಳ್ಳಲು ಉದ್ದೇಶಿಸಿರುವ 18,000 ಕೋಟಿ ರೂಪಾಯಿಗಳ ಮೊತ್ತದ 24 ಎಂ. ಎಚ್‌. ಮಾದರಿಯ ಸೇನಾಹೆಲಿಕಾಪ್ಟರ್‌ ಖರೀದಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ನಿರತವಾಗಿದೆ ಎನ್ನಲಾಗುತ್ತಿದೆ.

ಅನೇಕ ಬಾರಿ ಮಾತುಕತೆ
2018ರಿಂದ ಅಮೆರಿಕ ಭಾರತದ ಸ್ಟೀಲ್‌ ಮತ್ತು ಅಲುಮೀನಿಯಂ ಮೇಲಿನ ಜಾಗತಿಕ ಹೆಚ್ಚುವರಿ ಸುಂಕವನ್ನು ಕ್ರಮವಾಗಿ ಶೇ. 25 ಮತ್ತು ಶೇ. 10ರಷ್ಟು ಹೆಚ್ಚಿಸಿತು. ಅಮೆರಿಕಕ್ಕೆ ಪಾಠ ಕಲಿಸಲು ಭಾರತ 2019ರ ಜೂನ್‌ ತಿಂಗಳಿಂದ, ಅಮೆರಿಕದಿಂದ ರಫ್ತಾಗುವ 28 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು 50 ಪ್ರತಿಶತದಷ್ಟು ಏರಿಸಿಬಿಟ್ಟಿತು. ಇದರಿಂದ ಅಸಮಾಧಾನಗೊಂಡ ಅಮೆರಿಕ ಈ ವಿಷಯವನ್ನು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲೂಟಿಒ)ತನಕ ಒಯ್ದಿತ್ತು!

ಆಗಿನಿಂದಲೂ ಈ ತಿಕ್ಕಾಟವನ್ನು ತಗ್ಗಿಸಲು ಎರಡೂ ರಾಷ್ಟ್ರಗಳು ಮಾತುಕತೆ ನಡೆಸುತ್ತಲೇ ಇವೆ.

ಇಂಧನ ಶಕ್ತಿ
ಭಾರತವು ಪ್ರಸಕ್ತ 4 ಶತಕೋಟಿ ಡಾಲರ್‌ಗಳಷ್ಟು ಮೊತ್ತದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈಗ ಅಮೆರಿಕದ ಕಂಪನಿಗಳಾದ ಪಿಎಲ್‌ಸಿ, ಚೆನೀಯರ್‌ ಎನರ್ಜಿ, ಡಾಮೀನಿಯನ್‌ ಎನರ್ಜಿ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ಅನ್ವೇಷಿಸುವ ನಿರೀಕ್ಷೆಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next