Advertisement

ಔಷಧಿ ರಫ್ತು ನಿಷೇಧ: ಭಾರತದ ಮೇಲೆ ಅಮೆರಿಕಾ ಪ್ರತೀಕಾರದ ಎಚ್ಚರಿಕೆ! ಟ್ರಂಪ್ ಹೇಳಿದ್ದೇನು ?

10:34 AM Apr 08, 2020 | Mithun PG |

ವಾಷಿಂಗ್ಟನ್: ಕೋವಿಡ್-19  ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಮಲೇರಿಯಾ ವಿರೋಧಿ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್  ರಫ್ತು ಮೇಲಿನ ನಿಷೇಧವನ್ನು ಹಿಂಪಡೆಯದಿದ್ದರೆ  ಪ್ರತೀಕಾರದ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ಸುದ್ದಿಗೋಷ್ಟಿ ನಡುವೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಸಣ್ಣ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಅಮೆರಿಕಾದಲ್ಲಿ ಕೋವಿಡ್-19 ತಹಬದಿಗೆ ತರಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನವೂ ನಡೆಯುತ್ತಿದೆ. ಇವುಗಳ ನಡುವೆ ಮಲೇರಿಯಾ ತಡೆಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ಈ ಸೋಂಕಿಗೆ ಪರಿಹಾರ ಒದಗಿಸುತ್ತದೆ ಎಂದು ಟ್ರಂಪ್, ಇತ್ತೀಚಿಗೆ ನಡೆದ ಸಂಶೋಧನೆಯನ್ನೂ ಉಲ್ಲೇಖಿಸಿ ಹೇಳಿಕೊಂಡಿದ್ದರು.

ಈ ಬೆಳವಣಿಗೆಯ ನಡುವೆ ಭಾರತ ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿತ್ತು.  ಆರಂಭದಲ್ಲಿ ಇದರತ್ತ ಅಷ್ಟಾಗಿ ಗಮನ ಹರಿಯದಿದ್ದರೂ ಇದೀಗ ಭಾರತದ ನಿರ್ಧಾರ ಅಮೆರಿಕಾಕ್ಕೆ ಸಂಕಟ ತಂದೊಡ್ಡಿದೆ.

ಹೀಗಾಗಿ ಟ್ರಂಪ್ ‘ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ನಮ್ಮ ಬೇಡಿಕೆಯ ಹೈಡ್ರೋಕ್ಸಿಕ್ಲೋರೋಕ್ವಿನ್ ಪೂರೈಕೆಯನ್ನು ಒದಗಿಸಿದರೆ ಮೆಚ್ಚುತ್ತೇವೆ. ಒಂದೊಮ್ಮೆ ನಿರಾಕರಿಸಿದರೆ ಸಮಸ್ಯೆಯೇನಿಲ್ಲ, ಆದರೆ ಸಹಜವಾಗಿ ಪ್ರತಿಕಾರವೂ ಇರಬಹುದು, ಯಾಕೆ ಇರಬಾರದು’ ಎಂದು ಸವಾಲನ್ನು ಎಸೆದಿದ್ದಾರೆ.

ಅಮೆರಿಕಾದಲ್ಲಿ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿದ್ದು 10,871 ಜನರು ಬಲಿಯಾಗಿದ್ದು, 3,67,004 ಜನ ಸೋಂಕು ಪೀಡಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಹೈಡ್ರೋಕ್ಸಿಕ್ಲೋರೋಕ್ವಿನ್ ರಫ‍್ತು ನಿಷೇಧವಾಗಿದ್ದೇಕೆ: ಭಾರತದ ಡೆರಕ್ಟರೇಟ್ ಆಫ್ ಫಾರಿನ್ ಟ್ರೇಡ್ ಮಾರ್ಚ್ 25 ರಂದು ಹೈಡ್ರೋಕ್ಸಿಕ್ಲೋರೋಕ್ವಿನ್ ನೇರ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಅದರೆ ಪ್ರತಿಯೊಂದು ರಫ್ತು ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ಪರಶೀಲಿಸಿ ರಫ್ತಿಗೆ ಅನುವು ಮಾಡಿಕೊಡುವುದಾಗಿ ಸ್ಪಷ್ಟಪಡಿಸಿತ್ತು. ಹೆಚ್ಚುವರಿಯಾಗಿ ಮುಂಗಡವಾಗಿ ಹಣ ಪಾವತಿಸಿದ್ದರೆ ಅಥವಾ ಮುಂಗಡವಾಗಿ ವಾಪಾಸು ಪಡೆಯಲಾಗದ ಲೆಟರ್ ಆಫ್ ಕ್ರೆಡಿಟ್ ನೀಡಿದ್ದರೆ ಅಂತಹ ಶಿಪ್ ಮೆಂಟನ್ನು ರಫ್ತು ಮಾಡಲು ಅನುವು ಮಾಡಿಕೊಡಲಾಗುವುದು ಎಂದೂ ತಿಳಿಸಿತ್ತು. ಮಲೇರಿಯಾ ತಡೆ ಔಷಧ ರಫ್ತನ್ನು ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ಔಷಧ ಕೊರೆತ ಆಗಬಾರದು ಎಂಬ ಮುಂಜಾಗೃತ ಕ್ರಮವಾಗಿ ಭಾರತ ಸರ್ಕಾರ ಈ ಆದೇಶ ಹೊರಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next