Advertisement

ವಲಸಿಗ ಮಕ್ಕಳನ್ನು ಪ್ರತ್ಯೇಕಗೊಳಿಸುವ ನಿಯಮಕ್ಕೆ ತಡೆ

08:30 AM Jun 22, 2018 | Team Udayavani |

ವಾಷಿಂಗ್ಟನ್‌: ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ಝೀರೋ ಟಾಲರೆನ್ಸ್‌ ನೀತಿ ವಿರುದ್ಧ ಇಡೀ ಜಾಗತಿಕ ಸಮುದಾಯ ತಿರುಗಿಬಿದ್ದ ಹಿನ್ನೆಲೆಯಲ್ಲಿ ತನ್ನದೇ ಆದೇಶವನ್ನು ಮಾರ್ಪಾಡು ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇನ್ನು ಮುಂದೆ ಇವರ್ಯಾರನ್ನೂ ಬೇರ್ಪಡಿಸುವುದಿಲ್ಲ ಎಂದು ಹೇಳಿದ್ದಾರೆ.

Advertisement

ಅಮೆರಿಕ – ಮೆಕ್ಸಿಕೋ ಗಡಿಯಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಸುಮಾರು 2,300 ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಿ ಕೂಡಿಹಾಕಲಾಗಿತ್ತು. ಅಲ್ಲದೆ ಈ ಮಕ್ಕಳ ಆಕ್ರಂದನ, ಕಣ್ಣೀರಿನ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಪೋಪ್‌ ಫ್ರಾನ್ಸಿಸ್‌, ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಸೇರಿದಂತೆ ಜಗತ್ತಿನ ನಾಯಕರೆಲ್ಲರೂ ಟ್ರಂಪ್‌ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಗುರುವಾರ ಬೆಳಗ್ಗೆಯೇ ಅಧ್ಯಾದೇಶ ಹೊರಡಿಸಿದ್ದು ಇನ್ನು ಮುಂದೆ ಪೋಷಕರು ಮತ್ತು ಮಕ್ಕಳನ್ನು ಬೇರೆ ಮಾಡುವುದಿಲ್ಲವೆಂದು ಹೇಳಿದ್ದಾರೆ. ಜತೆಗೆ ಮಕ್ಕಳ ನೋವು ಸಹಿಸಲು ಅಸಾಧ್ಯವಾಗಿತ್ತು ಎಂದೂ ತಿಳಿಸಿದ್ದಾರೆ. 

ಇದರ ಜತೆಯಲ್ಲೇ ಅಕ್ರಮವಾಗಿ ಗಡಿದಾಟುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಹೀಗಾಗಿ ಝೀರೋ ಟಾಲರೆನ್ಸ್‌ ನೀತಿ ಜಾರಿಯಲ್ಲಿ ಇರುತ್ತದೆ. ಅಕ್ರಮ ವಲಸಿಗರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಹೊಸ ಆಧ್ಯಾದೇಶ ಹೊರಬಿದ್ದರೂ ಈ ವಲಸಿಗ ಕುಟುಂಬಗಳಿಗೆ ದೊಡ್ಡ ಸಮಾಧಾನವೇನೂ ಸಿಕ್ಕಿಲ್ಲ. ಇದೀಗ 2,300 ಮಕ್ಕಳನ್ನು ಜೈಲಿನಲ್ಲಿರುವ ಅವರ ಪೋಷಕರ ಜತೆಗೆ ಸೇರಿಸಲಾಗುತ್ತದೆಯಷ್ಟೇ.

ಅಧ್ಯಾದೇಶಕ್ಕೆ ಆಕ್ರೋಶ: ಈ ಮಧ್ಯೆ, ಹೊಸ ಅಧ್ಯಾದೇಶದಿಂದ ಹೆಚ್ಚಿನ ಅನುಕೂಲವೇನೂ ಆಗಿಲ್ಲ ಎಂದು ಅಮೆರಿಕದಲ್ಲಿರುವ ಭಾರತ ಮೂಲದ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕ ಕಾಂಗ್ರೆಸ್‌ ಸದಸ್ಯೆ ಪ್ರಮೀಳಾ ಜಯಪಾಲ್‌ ಅವರು, ಇದು ಮಕ್ಕಳನ್ನು ಪೋಷಕರಿಂದ ಬೇರ್ಪಡಿಸುವುದನ್ನು ತಪ್ಪಿಸುತ್ತದೆಯೇ ಹೊರತು, ಬೇರೆ ಅನುಕೂಲವಾಗಲ್ಲ. ಅಲ್ಲದೆ ಪೋಷಕರ ಜತೆ ಮಕ್ಕಳನ್ನೂ ಜೈಲಿನಲ್ಲಿ ಇಟ್ಟು ಹಿಂಸಿಸಲಾಗುತ್ತದೆ. ಹೀಗಾಗಿ ಇಡೀ ಝೀರೋ ಟಾಲರೆನ್ಸ್‌ ನೀತಿಯನ್ನೇ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಮತ್ತೂಬ್ಬ ಸಂಸದೆ ಕಮಲಾ ಹ್ಯಾರೀಸ್‌ ಕೂಡ ದನಿಗೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next