Advertisement

ಸತ್ಯ, ಪ್ರಾಮಾಣಿಕ ಸೇವೆಗೆ ದುಷ್ಟಶಕ್ತಿಗಳು ಬಿಡುವುದಿಲ್ಲ: ದಯಾನಂದ್‌

06:05 PM Apr 23, 2022 | Team Udayavani |

ಬಂಗಾರಪೇಟೆ: ಸಮಾಜದಲ್ಲಿ ಸತ್ಯವನ್ನು ಮಾತನಾಡಿದರೆ ಶತ್ರುಗಳು ತಾನಾಗೆಯೇ ಸೃಷ್ಟಿಯಾಗುತ್ತಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಮಾಜದ ದುಷ್ಟಶಕ್ತಿಗಳು ಬಿಡುತ್ತಿಲ್ಲ. ಸಮಾಜದ ನವನಿರ್ಮಾಣಕ್ಕೆ ಪ್ರಯತ್ನ ಮಾಡಿದರೆ ಶಿಕ್ಷೆಯೇ ಬೇರೆ ಆಗಿರುತ್ತದೆ ಎಂದು ತಹಶೀಲ್ದಾರ್‌ ಎಂ. ದಯಾನಂದ್‌ ಹೇಳಿದರು.

Advertisement

ತಾಲೂಕಿನ ಬಾವರಹಳ್ಳಿ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ 131ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಸತ್ಯ ಕಹಿಯಾಗಿರುವುದರಿಂದ ಅದನ್ನು ಯಾರೂ ಇಷ್ಟಪಡುವುದಿಲ್ಲ. ಡಾ. ಅಂಬೇಡ್ಕರ್‌ ತಮ್ಮ ಜೀವನದುದ್ದಕ್ಕೂ ಕಹಿಯನ್ನೇ ಉಂಡು, ಅವಮಾನ ಸಹಿಸಿ, ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೇ ಶಾಂತಚಿತ್ತರಾಗಿ ಹಂತವಾಗಿ ಬೆಳೆ ದು, ಈ ದೇಶಕ್ಕೆ ಸಂವಿಧಾನ ಬರೆದು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಅಂಬೇಡ್ಕರ್‌ ಅವರು ಜನಿಸದಿದ್ದರೆ, ಸಂವಿಧಾನ ಬರೆಯದಿದ್ದರೆ ಈ ದೇಶದಲ್ಲಿ ದಮನಿತರ ಸ್ಥಿತಿ ಹೇಗಿರುತ್ತಿತ್ತು ಎಂದು ಯೋಚಿಸಲು ಸಾಧ್ಯವಿಲ್ಲ. ರಾಜಕೀಯವು ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅವರ ಫ‌ಲವನ್ನು ಅನುಭಸುತ್ತಿರುವ ನಾವು, ಐಶಾರಾಮಿ ಜೀವನಕ್ಕೆ ಅಂಬೇಡ್ಕರ್‌ ಹೆಸರನ್ನು ಬಳಸಿಕೊಂಡು, ಅವರ ಆದರ್ಶಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ವಕೀಲ ಎಚ್‌.ವಿ.ಸುಬ್ರಮಣಿ ಧರ್ಮದ ಬಗ್ಗೆ ಸುದೀರ್ಘ‌ ವಿವರಣೆ ನೀಡಿ, ನಾವು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದಾಗ ಅದು ನಿಜವಾದ ಧರ್ಮವಾಗುತ್ತದೆ. ಧರ್ಮದ ವಿಚಾರವನ್ನು ಅವರವರ ಇಷ್ಟಕ್ಕೆ ಅನುಸಾರವಾಗಿ ಬಳಸಿಕೊಳ್ಳುತ್ತಿರುವುದರಿಂದ ಧರ್ಮದ ಅರ್ಥ ವೇ ಕಳೆದುಹೋಗುತ್ತಿದೆ ಎಂದು ಹೇಳಿದರು.

ಆದರ್ಶವಾಗಿಟ್ಟುಕೊಳ್ಳಿ: ವಯಸ್ಸಾದ ನಂತರ ನಾವು ಏನನ್ನೂ ಸಾಧಿಸಲು ಸುಲಭವಾಗುವುದಿಲ್ಲ. ಜೀವನದಲ್ಲಿ ಮುಂದೆ ಬಂದು ನಾಲ್ಕು ಮಂದಿಗೆ ಉಪಯೋಗವಾಗಬೇಕೆಂದರೆ ಸಣ್ಣ ವಯಸ್ಸಿನಲ್ಲೇ ಪ್ರಯತ್ನಪಟ್ಟು ಸಾಧಿಸ‌ಬೇಕು. ಇದಕ್ಕೆ ವಿಶ್ವ ಮನ್ನಣೆ ಗಳಿಸಿರುವ ಸರ್ವರ ಸಮಾನತೆಗಾಗಿ ತಮ್ಮ ಜೀವನ ವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.

Advertisement

ಗೌರವ ತಾನಾಗೇ ಬರುತ್ತೆ: ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಕೋಲಾರದ ವಕೀಲ ಕೆ.ವಿ.ಸುರೇಂದ್ರ ಕುಮಾರ್‌ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಪ್ರತಿಯೊಬ್ಬರು ತಂದೆ-ತಾಯಿ, ಗುರುಗಳನ್ನು ಗೌರವಿಸಿದರೆ ಗೌರವ ತಾನಾಗೇ ಬರುತ್ತದೆ ಎಂದು ವಿವರಿಸಿದರು.

ವೇದಿಕೆಯಲ್ಲಿದ್ದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜುಲು, ಮುಖಂಡ ದೇಶಿಹಳ್ಳಿ ವೆಂಕಟರಾಂ, ಹೊಸಕೋಟೆ ರಾಮ ದಾಸ್‌, ಮಾಲೂರಿನ ಪಿ.ಎಂ.ಕೃಷ್ಣಪ್ಪ ಮುಂತಾದವರು ಮಾತನಾಡಿದರು. ವಕೀಲರಾದ ಕೂತಾಂಡಹಳ್ಳಿ ರಮೇಶ್‌, ಪೋಕಸ್‌ ಸಂಸ್ಥೆಯ ಸಂಸ್ಥಾಪಕ ಹರೀಶ್‌, ನಿರ್ದೇಶಕರಾದ ಅತ್ತಿಗಿರಿ ನಾರಾಯಣಪ್ಪ, ಎಸ್‌.ಆರ್‌.ನಾರಾಯಣ, ಹಂಚಾಳ ಪಿ.ಕೃಷ್ಣಪ್ಪ, ರಂಗಪ್ಪ, ಚಂದ್ರಯ್ಯ, ಆರ್‌.ವಾಸನ್‌, ಕದಿರೇನಹಳ್ಳಿ ವೆಂಕಟೇಶಪ್ಪ, ಟ್ರಸ್ಟಿನ ಹಿರಿಯ ನಿರ್ದೇಶಕರಾದ ಡಾ.ಎಂ. ಗೋವಿಂದರಾಜು, ಟ್ರಸ್ಟಿನ ಅಧ್ಯಕ್ಷ ದೇವಕುಮಾರ್‌, ಜೆ.ಶ್ರೀನಿವಾಸ್‌, ಗಂಗಮ್ಮನ ಪಾಳ್ಯ ರವಿಬಾಬು, ಮಾಲೂರಿನ ತೋಟಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next