ಪಾಟ್ನ: ಚಿನ್ನ, ಬೆಳ್ಳಿ, ನಗದು ಕಳ್ಳತನ ನಡೆಯುವುದು ಓದಿದ್ದೀರಿ. ಆದರೆ ಬಿಹಾರದಲ್ಲಿ ಆರು ಮಂದಿ ಶಸ್ತ್ರ ಸಜ್ಜಿತ ತಂಡ ಲಾರಿಯಲ್ಲಿ 5 ಟನ್ ತುಂಬಿದ್ದ ಈರುಳ್ಳಿಯನ್ನೇ ಲೂಟಿ ಮಾಡಿರುವ ಘಟನೆ ನಡೆದಿದೆ.
ಬಿಹಾರದ ಓಲ್ಡ್ ಗ್ರ್ಯಾಂಡ್ ಟ್ರಂಕ್ ರಸ್ತೆಯ ಸಮೀಪ ಲಾರಿಯನ್ನು ಅಡ್ಡಗಟ್ಟಿ ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ 5 ಟನ್ ಗಳಷ್ಟು ಈರುಳ್ಳಿಯನ್ನು ಗುರುವಾರ ರಾತ್ರಿ ಲೂಟಿ ಮಾಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 100ರಿಂದ 120 ರೂಪಾಯಿ ಇದೆ ಎಂದು ಹೇಳಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಕಾರಿನಲ್ಲಿದ್ದ ಆರು ಮಂದಿ ದರೋಡೆಕೋರರು ಮುಥಾನಿ ತಿರುವಿನ ಸಮೀಪದ ಜಿಟಿ ರಸ್ತೆಯಲ್ಲಿ ರಾತ್ರಿ 10.30ಕ್ಕೆ ಲಾರಿಯನ್ನು ಅಡ್ಡಗಟ್ಟಿದ್ದರು. ನಂತರ ಲಾರಿ ಚಾಲಕ ದೇಶ್ ರಾಜ್ ನನ್ನು ಗನ್ ಪಾಯಿಂಟ್ ನಲ್ಲಿ ಬೆದರಿಸಿ ಹಿಡಿದಿಟ್ಟುಕೊಂಡು ಲಾರಿಯನ್ನು ಹೈಜಾಕ್ ಮಾಡಿರುವುದಾಗಿ ತಿಳಿಸಿದೆ.
ಈರುಳ್ಳಿ ತುಂಬಿದ ಲಾರಿಯನ್ನು ದರೋಡೆಕೋರನೊಬ್ಬ ಚಲಾಯಿಸಿಕೊಂಡು ಹೋಗಿದ್ದ. ನಂತರ ದರೋಡೆಕೋರರು ಲಾರಿ ಚಾಲಕನನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಬಿಟ್ಟಿರುವುದಾಗಿ ತಿಳಿಸಿದ್ದಾನೆ. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಕಾಲ್ನಡಿಗೆಯಲ್ಲಿ ಬಂದ ಚಾಲಕ ರಾಜ್ ಮಿನಿ ಟ್ರಕ್ ನಲ್ಲಿ ವಾಪಸ್ ಬಂದು, ಅಪಹರಣಕಾರರು ಟ್ರಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಿದ್ದ. ನಂತರ ಚಾಲಕ ಜೇಹಾನಾಬಾದ್ ನಲ್ಲಿರುವ ವ್ಯಾಪಾರಿ ಮೊಹಮ್ಮದ್ ಮಿನ್ಹಾಜ್ ರಾಯೀಸ್ ಗೆ ವಿಷಯ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕ ನೀಡಿರುವ ಮಾಹಿತಿ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈರುಳ್ಳಿ ಟ್ರಕ್ ಹೈಜಾಕ್ ಮಾಡಿ ದರೋಡೆ ಮಾಡಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೋಹಾನಿಯಾ ಪೊಲೀಸ್ ಠಾಣಾಧಿಕಾರಿ ಉದಯ್ ಭಾನು ಸಿಂಗ್ ತಿಳಿಸಿದ್ದಾರೆ.