Advertisement

ಅಂಗಡಿಮಜಲು ಸೇತುವೆ ಕಾಮಗಾರಿ ಬಹುತೇಕ ಪೂರ್ಣ

12:26 AM Mar 09, 2020 | Sriram |

ಸುಳ್ಯ: ಹಲವು ದಶಕಗಳ ಬೇಡಿಕೆಯಾಗಿದ್ದ ಅರಂತೋಡು ಗ್ರಾಮದ ಅಂಗಡಿಮಜಲು ಬಳಿ ಬಲಾ°ಡು ಹೊಳೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಕೆಲ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

Advertisement

ಈ ಸೇತುವೆ ನಿರ್ಮಾಣದಿಂದ ಹೊಳೆಯ ಎರಡೂ ಭಾಗಗಳ 300ಕ್ಕೂ ಅಧಿಕ ಮನೆ ಮಂದಿಯ ಸಂಚಾರ ಸಮಸ್ಯೆಗೆ ಪರಿಹಾರ ಸಿಗಲಿದೆ. ಸುತ್ತಾಟ, ತೂಗು ಸೇತುವೆ ನಡಿಗೆಗೆ ಮುಕ್ತಿ ಸಿಗಲಿದೆ.

3.6 ಕೋಟಿ ರೂ.
ರಾಜೀವಗಾಂಧಿ ಆರೋಗ್ಯ ವಿ.ವಿ. ಸಿಂಡಿಕೇಟ್‌ ಸದಸ್ಯರಾಗಿದ್ದ ಡಾ| ಬಿ. ರಘು 2018ರಲ್ಲಿ ಅಂದಿನ ಲೋಕೋಪಯೋಗಿ ಸಚಿವರಿಗೆ ಸೇತುವೆಗೆ ಅನುದಾನ ಕೋರಿ ಮನವಿ ಸಲ್ಲಿಸಿದ್ದರು. ಅನಂತರ ಕೆಆರ್‌ಡಿಸಿಎಲ್‌ ಮೂಲಕ 3.6 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ಸರಕಾರ ಅನುಮೋದನೆ ನೀಡಿತ್ತು. 2018ರ ಮಾ. 23ಕ್ಕೆ ಸೇತುವೆ ಕಾಮಗಾರಿ ಆರಂಭಗೊಂಡು 2020 ಮಾರ್ಚ್‌ ನೊಳಗೆ ಪೂರ್ಣಗೊಳಿಸುವ ಗಡುವು ನೀಡಲಾಯಿತು. ಕಾಸರಗೋಡಿನ ಲೋಫ್‌ ಕನ್‌ಸ್ಟ್ರಕ್ಷನ್‌ ಗುತ್ತಿಗೆ ವಹಿಸಿ ಕೊಂಡಿದೆ. ಕಾಮಗಾರಿ ಭರದಿಂದ ಸಾಗಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಸೇತುವೆ 60 ಮೀ. ಉದ್ದವಿದ್ದು, 6 ಪಿಲ್ಲರ್‌ಗಳಿವೆ. ಕೆಳಭಾಗ 11.9 ಮೀ. ಅಗಲವಿದೆ. ಮೇಲ್ಭಾಗ 10.5 ಮೀ. ವಿಸ್ತಾರವಿದೆ.

ಸುತ್ತಾಟ ಸಂಕಟ
ಹೊಸ ಸೇತುವೆ ಅಣತಿ ದೂರದಲ್ಲಿ ಬಿಳಿಯಾರು-ಕಲ್ಲುಮುಟ್ಲು ರಸ್ತೆಯ ಪಿಂಗಾರ ತೋಟದ ಕುಕ್ಕುಂಬಳ ಅಂಗಡಿಮಜಲು ಬಳಿ 1996ರಲ್ಲಿ ಪಾದಚಾರಿ ಸಂಚಾರಕ್ಕೆಂದು 5 ಲಕ್ಷ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಲಾಗಿತ್ತು.

ಈ ಸೇತುವೆ ನಿರ್ಮಾಣಕ್ಕಿಂತ ಮೊದಲು ಹೊಳೆ ಭಾಗದಿಂದ 1.5 ಕಿ.ಮೀ. ದೂರದ ಅರಂತೋಡಿಗೆ ಬರಲು ಕಲ್ಲುಮುಟ್ಲು – ಬಿಳಿಯಾರು ರಸ್ತೆಯಲ್ಲಿ 7 ಕಿ.ಮೀ. ದೂರ ಸಂಚರಿಸಬೇಕಿತ್ತು. ತೂಗು ಸೇತುವೆ ನಿರ್ಮಾಣದಿಂದ ಪಾದಚಾರಿ ನಡಿಗೆ ಹತ್ತಿರವಾಯಿತು. ಆದರೆ ವಾಹನ ಸಂಚಾರಕ್ಕೆ ಮಾತ್ರ ಸುತ್ತಾಟವೇ ಗತಿಯಾಗಿತ್ತು. ಬೇಸಗೆಯಲ್ಲಿ ಹೊಳೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು.

Advertisement

300 ಮನೆಗಳಿಗೆ ಪ್ರಯೋಜನ
ಹೊಸ ಸೇತುವೆಯಿಂದ ಅಡ್ಕಬಳೆ, ಬಾಜಿನಡ್ಕ, ನಡ, ಕಳಬೈಲು, ಗುಂಡ್ಲ, ದೇರಾಜೆ, ಮರ್ಕಂಜ ಭಾಗದ 300ಕ್ಕೂ ಅಧಿಕ ಮನೆಗಳಿಗೆ ಆರಂತೋಡು ಪೇಟೆಯ ಸಂಪರ್ಕಕ್ಕೆ ಅನುಕೂಲವಾಗಲಿದೆ. ಕೊಡಗು, ಸುಳ್ಯ ಪ್ರದೇಶಕ್ಕೆ ಶಾಲಾ ಕಾಲೇಜು, ಕೆಲಸಕ್ಕೆ ಬರುವವರಿಗೆ ಈ ಸೇತುವೆ ಪ್ರಯೋಜನವಾಗಲಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next