ಮುಂಬೈ: ಶನಿವಾರ ಬೆಳ್ಳಂಬೆಳಗ್ಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ತನ್ನ ಬೆಂಬಲಿಗರೊಂದಿಗೆ ಬಿಜೆಪಿಗೆ ನಿಷ್ಠೆ ತೋರಿ ಉಪಮುಖ್ಯಮಂತ್ರಿ ಪಟ್ಟಕ್ಕೇರಿದ ಅಜಿತ್ ಪವಾರ್ ಗೆ ಹೊಸ ಸಂಕಷ್ಟ ಎದುರಾಗಿದೆ.
ಇಂದು ಬೆಳಿಗ್ಗೆ ರಾಜಭವನದಲ್ಲಿ ನಡೆದಿದ್ದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವರು ಎನ್ ಸಿಪಿ ಶಾಸಕರು ಮಧ್ಯಾಹ್ನದ ಸುದ್ದಿಗೋಷ್ಠಿಯಲ್ಲಿ ಶರದ್ ಪವಾರ್ ಅವರ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
‘’ಅಜಿತ್ ಪವಾರ್ ಅವರು ರಾಜಭವನಕ್ಕೆ ಬರಲು ಹೇಳಿದ್ದರು. ಹಾಗಾಗಿ ನಾವು ಹೋಗಿದ್ದೆವು. ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಶರದ್ ಪವಾರ್ ಅವರೇ ನಮ್ಮ ನಾಯಕ’’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಗೆ ಈಗಲೂ 170 ಶಾಸಕರ ಬೆಂಬಲವಿದೆ. ಬಿಜೆಪಿ ಮತ್ತು ಅಜಿತ್ ಬೆಂಬಲಿತ ಎನ್ ಸಿಪಿಗೆ ಬಹುಮತವಿಲ್ಲ. ಅಜಿತ್ ಜೊತೆ 10 ರಿಂದ 12 ಶಾಸಕರಿರಬಹುದು ಎಂದು ಶರದ್ ಪವಾರ್ ಹೇಳಿದರು.
288 ಸಂಖ್ಯಾಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿದೆ. ಸರಳ ಬಹುಮತಕ್ಕೆ ಇನ್ನೂ ಕನಿಷ್ಟ 40 ಶಾಸಕರ ಬೆಂಬಲ ಅಗತ್ಯ.