ಭಟ್ಕಳ: ತಾಲೂಕಿನಲ್ಲಿ ಆಧಾರ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಹರಸಾಹಸ ಪಡಬೇಕಾಗಿ ಬಂದಿದೆ. ಒಂದೆಡೆ ಸರಕಾರ ಎಲ್ಲದಕ್ಕೂ ಆಧಾರ ಕಾರ್ಡ ಕೇಳಿದರೆ, ಇನ್ನೊಂದೆಡೆ ಆಧಾರ ಸೆಂಟರ್‌ಗಳನ್ನೆಲ್ಲ ಮುಚ್ಚಿ ಕೇವಲ ನೆಮ್ಮದಿ ಕೇಂದ್ರ ಮತ್ತು ಅಂಚೆ ಕಚೇರಿಗಳಲ್ಲಿ ಮಾತ್ರ ಆಧಾರ ಕಾರ್ಡ್ ನೀಡುವ ಹಾಗೂ ತಿದ್ದುಪಡಿ ಮಾಡಲಾಗುತ್ತಿದ್ದು, ಇದರಿಂದ ಜನ ಸಂಕಟ ಪಡುವಂತಾಗಿದೆ.
ಈ ಹಿಂದೆ ಗ್ರಾಪಂ ಮಟ್ಟದಲ್ಲಿ ಆಧಾರ ಕಾರ್ಡ್ ನೋಂದಣಿ ಮಾಡಲಾಗುತ್ತಿದ್ದರೆ ನಂತರದ ದಿನಗಳಲ್ಲಿ ಅವುಗಳನ್ನು ಕೂಡಾ ಬಂದ್ ಮಾಡಲಾಯಿತು. ಅಂದು ಆಧಾರ ಕಾರ್ಡ್ ಎಲ್ಲ ಕಡೆಗಳಲ್ಲಿಯೂ ಕಡ್ಡಾಯವಲ್ಲದ ಕಾರಣ ಜನತೆ ಹೆಚ್ಚು ಆಸಕ್ತಿ ತೋರಿಸಿಲ್ಲವಾಗಿತ್ತು. ಇಂದು ಆಧಾರ್ ಕಡ್ಡಾಯಗೊಳಿಸಿದ ಸರಕಾರ ಆಧಾರ್ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆದಿಲ್ಲ. ಇದರಿಂದ ನಾಗರಿಕರು ಪರದಾಡುವಂತಾಗಿದೆ.
ಇಲ್ಲಿನ ನೆಮ್ಮದಿ ಕೇಂದ್ರದಲ್ಲಿ ಆಧಾರ ನೋಂದಣಿ, ತಿದ್ದುಪಡಿಗೆ ದಿನಕ್ಕೆ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು ಟೋಕನ್ ಪದ್ಧತಿಯಿಂದ ಜನತೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ದಿನಾಲೂ ನೂರಾರು ಜನ ಟೋಕನ್ ಪಡೆಯಲು ಬರುತ್ತಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವುದರಿಂದ ಬೆಳಗಿನಜಾವ 3 ಗಂಟೆಗೆ ಸರತಿ ಸಾಲು ಆರಂಭವಾಗುತ್ತದೆ. ಇದೇ ರೀತಿ ಅಂಚೆ ಕಚೇರಿ ಎದರು ಕೂಡಾ ಬೆಳಗಿನ ಜಾವ 3-4 ಗಂಟೆಗೆ ಸರತಿಯ ಸಾಲು ಆರಂಭವಾಗುತ್ತಿದೆ. ಮಳೆಯನ್ನೂ ಲೆಕ್ಕಿಸದೇ ಚಿಕ್ಕ ಮಕ್ಕಳೊಂದಿಗೆ ಕೂಡಾ ಅನೇಕರು ಬಂದು ಇಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕೇವಲ ನೆಮ್ಮದಿ ಕೇಂದ್ರ ಮತ್ತು ಅಂಚೆ ಕಚೇರಿಗಳು ಮಾತ್ರ ಆಧಾರ ಕಾರ್ಡ್ ನೋಂದಣಿಗೆ ಕೇಂದ್ರಗಳಾಗಿದ್ದರಿಂದ ಜನತೆಯ ನೆಮ್ಮದಿಯೇ ಹಾಳಾಗಿ ಹೋಗಿದೆ.
ಆಧಾರ್ ಕಾರ್ಡ ಪಡೆಯುವಲ್ಲಿ ಹಾಗೂ ತಿದ್ದುಪಡಿ ಮಾಡಿಸುವಲ್ಲಿ ಆಗುತ್ತಿರುವ ತೊಂದರೆ ಜಿಲ್ಲಾಡಳಿತದ ಗಮನದಲ್ಲಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಮಾತ್ರ ಜನತೆಯ ಕುರಿತು ಇವರಿಗಿರುವ ಕಾಳಜಿ ವ್ಯಕ್ತವಾಗುತ್ತದೆ. ತಾಲೂಕಾ ಆಡಳಿತವೂ ಸಹ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕೂಡಾ ಮಾಡದಿರುವುದು ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.