ಕಲಬುರಗಿ: ಕೋವಿಡ್ ದಿಂದ ಮೊದಲೇ ವ್ಯಾಪಾರದಲ್ಲಿ ನಷ್ಟ ಹೊಂದಿರುವ ವ್ಯಾಪಾರಸ್ಥರು ಸಾರ್ವಜನಿಕರ ಒತ್ತಾಯದ ಮೇರೆಗೆ ದೀಪಾವಳಿ ಹಬ್ಬಕ್ಕಾಗಿ ಪಟಾಕಿ ಮಾರಾಟ ಮಾಡಲು ಮುಂದಾಗಿದ್ದರೆ ಅದಕ್ಕೂ ಸರ್ಕಾರ ತಣ್ಣಿರಿರೆರಚಿದೆ.
ಪಟಾಕಿ ಮಾರಾಟವನ್ನು ನವೆಂಬರ್ 1ರಿಂದ 17ರ ವರೆಗೆ ಮಾಡಬಹುದು ಎಂಬುದಾಗಿ ಸರ್ಕಾರ ಕೆಲ ಷರತ್ತುಗಳೊಂದಿಗೆ ಆದೇಶ ಹೊರಡಿಸಿತ್ತು. ಹೀಗಾಗಿ ಪಟಾಕಿ ಮಾರಾಟದ ವರ್ತಕರು ಲಕ್ಷಾಂತರ ರೂ. ಖರ್ಚು ಮಾಡಿ ಇಲ್ಲಿನ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಮಳಿಗೆ ನಿರ್ಮಿಸುತ್ತಿದ್ದಾರೆ. ಮುಖ್ಯವಾಗಿ ಮೈದಾನಕ್ಕೆ ನೂರಾರು ಟಿಪ್ಪರ್ ಮುರುಮ್ ಹಾಕಿ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಎಲ್ಲ ವರ್ತಕರು ಖರ್ಚು ಮಾಡಿದ್ದಾರೆ. ಆದರೆ ಶುಕ್ರವಾರ ಸರ್ಕಾರ ದಿಢೀರನೇ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ, ಗಾಯದ ಮೇಲೆ ಬರೆ ಎಳೆದಿದೆ.
ಪಟಾಕಿ ಮಾರಾಟಕ್ಕಾಗಿ ವರ್ತಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಲಕ್ಷಾಂತರ ರೂ. ಮೌಲ್ಯದ ಪಟಾಕಿಯನ್ನು ತಮಿಳನಾಡಿನ ಶಿವಕಾಶಿಯಿಂದ ತರಿಸಿಕೊಂಡಿದ್ದಾರೆ.ಈಗಾಗಲೇ ಪಟಾಕಿ ತಯಾರಿಕಾ ಕಂಪನಿಗಳಿಗೆ ವರ್ತಕರು ಲಕ್ಷಾಂತರ ರೂ. ಪಾವತಿಸಿದ್ದಾರೆ. ಸರ್ಕಾರಕ್ಕೆ ಒಂದು ವೇಳೆ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದ್ದರೆ 15 ದಿನಗಳ ಮುಂಚೆಯೇ ಮಾಡಬೇಕಿತ್ತು. ಹೀಗೆ ಮಾಡಿದ್ದಲ್ಲಿ ತಾವು ಸಾಲ ಮಾಡಿ ಪಟಾಕಿ ಖರೀದಿಯೇ ಮಾಡುತ್ತಿರಲಿಲ್ಲ. ಜತೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಮೈದಾನ ಅಭಿವೃದ್ಧಿ ಹಾಗೂ ಮಳಿಗೆ ನಿರ್ಮಿಸುತ್ತಿರಲಿಲ್ಲ ಎಂದು ವರ್ತಕರು ಅಳಲು ತೋಡಿಕೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಕೋಟ್ಯಂತರ ರೂ. ಮೌಲ್ಯದ ಪಟಾಕಿಯನ್ನು ಜಿಲ್ಲೆಯ ವರ್ತಕರು ಖರೀದಿಸಿದ್ದಾರೆ.
ಆದರೆ ಸರ್ಕಾರ ಹಿಂದೆ ಮುಂದೆ ಯೋಚಿಸದೇ ನಿಷೇಧ ಹೇರಿದ್ದು ಯಾವ ನ್ಯಾಯ? ಎಂದು ಶರಣಬಸವೇಶ್ವರ ಪಟಾಕಿ ವರ್ತಕರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ವೈ. ಪಡಶೆಟ್ಟಿ, ಉಪಾಧ್ಯಕ್ಷ ಶಿವಶರಣಪ್ಪಹೂಗಾರ, ಕಾರ್ಯದರ್ಶಿ ಚೆನ್ನವೀರ ಲಿಂಗನವಾಡಿ ಹಾಗೂ ಇತರ ಪದಾಧಿಕಾರಿಗಳು ಖಾರವಾಗಿ ಪ್ರಶ್ನಿಸಿದ್ದಾರೆ. ಸರ್ಕಾರ ಎಲ್ಲವನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಮುಂದಾಲೋಚನೆ ಇಲ್ಲದೇ ನಿರ್ಧಾರ ತೆಗೆದುಕೊಂಡರೆ ಎಲ್ಲರಿಗೂ ನಷ್ಟ ಎಂದಿದ್ದಾರೆ.
ಕೋವಿಡ್ ಹೊಡೆತದ ನಡುವೆ ಪಟಾಕಿ ವ್ಯಾಪಾರ ಮಾಡಿಕೊಂಡು ಒಂದಿಷ್ಟು ನಷ್ಟ ತಗ್ಗಿಸಬಹುದೆಂದು ಸಾಲ ಮಾಡಿ ಪಟಾಕಿ ಖರೀದಿ ಮಾಡಿದವರಿಗೆ ಸರ್ಕಾರ ಬರೆ ಎಳೆದಿದೆ. ಅಲ್ಲದೇ ಬಹುಸಂಖ್ಯಾತ ಹಿಂದೂಗಳ ಭಾವನೆ ಹಾಗೂಸಂಸ್ಕೃತಿ ಸಾವಿರಾರು ವರ್ಗಗಳಿಂದ ನಡೆದುಕೊಂಡು ಬಂದ ಪರಂಪರೆಗೆ ಧಕ್ಕೆಯನ್ನುಂಟು ಮಾಡಿದೆ. ಸರ್ಕಾರ ಬಹುಸಂಖ್ಯಾತರ ಭಾವನೆಗೆ ಗೌರವಿಸುತ್ತದೆ ಎಂಬುದಾಗಿ ನಂಬಲಾಗಿದೆ. ಈಗಲಾದರೂಒಂದು ವೇಳೆ ಸರ್ಕಾರ ತನ್ನ ನಿರ್ಧಾರ ಬದಲಿಸದೇ ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ.-
ಎಂ.ಎಸ್. ಪಾಟೀಲ ನರಿಬೋಳ, ಗೌರವಾಧ್ಯಕ್ಷ, ಅಖೀಲ ಭಾರತ ವೀರಶೈವ ಮಹಾಸಭಾ ಯುವ ಘಟಕ
ಸಂಕಷ್ಟದ ನಡುವೆ ಸಾಲ ಮಾಡಿ ಲಕ್ಷಾಂತರ ರೂ. ಮೌಲ್ಯದ ಪಟಾಕಿ ಖರೀದಿಸಲಾಗಿದೆಯಲ್ಲದೇ ಮಳಿಗೆ ನಿರ್ಮಾಣಕ್ಕೂ ಹಣ ಖರ್ಚು ಮಾಡಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದ್ದು ಸರಿಯಲ್ಲ. ಒಂದು ವೇಳೆ ಪಟಾಕಿ ಮಾರಾಟಕ್ಕೆ ನಿಷೇಧ ಮಾಡುವಂತಿದ್ದರೆ 15 ದಿನ ಮೊದಲೇ ಮಾಡಬೇಕಿತ್ತು. ಸರ್ಕಾರ ಯೋಚಿಸಿ ತನ್ನನಿರ್ಧಾರದಿಂದ ಹಿಂದೆ ಸರಿಯಬೇಕು. –
ರೇವಣಸಿದ್ದಪ್ಪ ವೈ. ಪಡಶೆಟ್ಟಿ, ಅಧ್ಯಕ್ಷ, ಶರಣಬಸವೇಶ್ವರ ಪಟಾಕಿ ವರ್ತಕರ ಸಂಘ