ಈಶ್ವರ ಮಂಗಲ: ಪುತ್ತೂರು-ಸುಳ್ಯ-ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗ ಜ.3ರ ಬುಧವಾರ ಮುಂಜಾನೆ ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿ ಹತ್ತು ಬಾಳೆ ಗಿಡ ಹಾನಿ ಮಾಡಿದ್ದು, ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ, ಕೊಂಬೆಗಳನ್ನು ಮುರಿದು ತಿಂದಿದೆ.
ಈಗಾಗಲೇ ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ.
ಒಂಟಿ ಸಲಗ ಮತ್ತೆ ಮತ್ತೆ ಜನನಿಬಿಡ ಪ್ರದೇಶಗಳಿಗೆ ದಾಳಿ ಮಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಈಗಾಗಲೇ ಈ ಆನೆಯನ್ನು ಹಿಡಿದು ಬೇರೆಡೆಗೆ ಸಾಗಿಸುವ ಕೆಲಸ ಆಗಬೇಕೆಂದು ಕೃಷಿಕರು ಆಗ್ರಹಿಸುತ್ತಾರೆ.
ಒಂಟಿ ಸಲಗ ಇನ್ನಷ್ಟು ಕೃಷಿ ಹಾನಿಗೊಳಿಸುವ ಸಾಧ್ಯತೆ ಇದ್ದು, ಕೃಷಿಕರು ರಾತ್ರಿ ತೋಟಕ್ಕೆ ಹೋಗದಂತೆ ಎಚ್ಚರದಿಂದಿದ್ದು, ಪ್ರಾಣ ಹಾನಿಯಾಗದಂತೆ ಜಾಗೃತೆ ವಹಿಸುವಂತೆ ಅರಣ್ಯ ಇಲಾಖೆಯವರು ಸಲಹೆ ನೀಡಿದ್ದಾರೆ.