Advertisement

ಕಿರು ಸೇತುವೆಯಾಗಿ 15 ವರ್ಷಗಳು ಕಳೆದರೂ ಸಂಚಾರ ಸಂಕಷ್ಟ

08:30 AM Dec 04, 2020 | Suhan S |

ಕುಂದಾಪುರ, ಡಿ. 3: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಡಾಮಕ್ಕಿ ಗ್ರಾಮದ ಎಡ್ಮಲೆಯಲ್ಲಿ ಒಂದೂವರೆ ದಶಕದ ಹಿಂದೆ ವಿಶೇಷ ಅನುದಾನದಲ್ಲಿ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಕಿರು ಸೇತುವೆ ನಿರ್ಮಾಣಗೊಂಡು 15 ವರ್ಷಗಳು ಕಳೆದರೂ, ಇನ್ನೂ ಜನ ಸಂಕಷ್ಟದಲ್ಲೇ ಸಂಚರಿಸಬೇಕಾದ ದುಃಸ್ಥಿತಿ ಈ ಕಿರು ಸೇತುವೆಯದ್ದಾಗಿದೆ.

Advertisement

ಊರವರೇ ಪ್ರತಿ ವರ್ಷ ಈ ಕಿರು ಸೇತುವೆಯಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಅಡಿಕೆ ಮರದ ಕಾಲು ಸಂಕವನ್ನು ನಿರ್ಮಿಸುತ್ತಾರೆ. ಅದು ಒಂದು ಮಳೆಗಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮತ್ತೂಂದು ಮಳೆಗಾಲಕ್ಕೆ ಮತ್ತೆ ಬೇರೆಯೇ ಕಾಲು ಸಂಕ ನಿರ್ಮಿಸಬೇಕಾಗುತ್ತದೆ.

ಹೊಳೆ ದಾಟಲು ಆಧಾರ :

ಇದು ಮಡಾಮಕ್ಕಿ ಕಡೆಯಿಂದ ಎಡ್ಮಲೆ ಕಡೆಗೆ ಸಂಚರಿಸಲು ಅನುಕೂಲವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯಡಿ 15 ವರ್ಷಗಳ ಹಿಂದೆ ಅಂದಾಜು 1.50 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಕಿರು ಸೇತುವೆಯಾಗಿದೆ. ಈ ಸೇತುವೆಯ ಆ ಕಡೆಗೆ ಇರುವುದು 5 ಮನೆಗಳು ಮಾತ್ರ. ಆದರೆ ಈ ಕಿರು ಸೇತುವೆಯಿಲ್ಲದಿದ್ದಲ್ಲಿ ಮಳೆಗಾಲದಲ್ಲಿ ಈ 5 ಮನೆಗಳಿಗೆ ಸಂಪರ್ಕವೇ ಇಲ್ಲದಂತಾಗುತ್ತದೆ. ಇವರಿಗೆ ಇಲ್ಲಿನ ಹೊಳೆ ದಾಟಲು ಇದೇ ಕಿರು ಸೇತುವೆಯೇ ಆಧಾರವಾಗಿದೆ. ಇನ್ನು ಕಿರು ಸೇತುವೆಯ ಈ ಕಡೆ 8-10 ಮನೆಗಳಿದ್ದು, ಅವರು ಕೃಷಿ ಭೂಮಿ, ಮತ್ತಿತರರ ಕೆಲಸ ಕಾರ್ಯಕ್ಕಾಗಿ ಆಚೆ ಹೋಗಲು ಇದೇ ಕಿರು ಸೇತುವೆಯನ್ನು ಅವಲಂಬಿಸಿದ್ದಾರೆ.

2-3 ಸಲ ಪ್ರಸ್ತಾವ :

Advertisement

ಈ ಹಿಂದೊಮ್ಮೆ ಈ ಕಿರು ಸೇತುವೆಯ ಸಂಪರ್ಕ ಸಾಧ್ಯವಾಗಿಸಲು ಕಾಮಗಾರಿಗಾಗಿ 14 ಹಣಕಾಸು ಯೋಜನೆಯಡಿ 90 ಸಾವಿರ ರೂ. ವಿಶೇಷ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಆ ಅನುದಾನ ಸಾಕಾಗದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಈ ಕಿರು ಸೇತುವೆಗೆ ಸಂಪರ್ಕಕಲ್ಪಿಸುವ ಕುರಿತಂತೆ ಮಡಾಮಕ್ಕಿ ಗ್ರಾಮಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾವವಾಗಿದ್ದು, ಪಂಚಾಯತ್‌ನಿಂದ ಈಗಾಗಲೇ 2-3 ಸಲ ಜಿಲ್ಲಾ ಪಂಚಾಯತ್‌ಗೆ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುವುದಾಗಿ ತಿಳಿದು ಬಂದಿದೆ.

ಮಡಾಮಕ್ಕಿ ಗ್ರಾಮದ ಎಡ್ಮಲೆಯಲ್ಲಿರುವ ಕಿರು ಸೇತುವೆಯಲ್ಲಿ ಇನ್ನೂ ಸಂಪರ್ಕ ಕಲ್ಪಿಸದಿರುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಶೀಘ್ರ ಪರಿಶೀಲನೆ ನಡೆಸಿ, ಪಂಚಾಯತ್‌ನಿಂದ ಈ ಹಿಂದೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದರ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು.  – ಪ್ರಭಾಶಂಕರ್‌ ಪುರಾಣಿಕ್‌, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (ಪ್ರಭಾರ) ಮಡಾಮಕ್ಕಿ

Advertisement

Udayavani is now on Telegram. Click here to join our channel and stay updated with the latest news.

Next