ನಟ ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ “ತ್ರಿವಿಕ್ರಮ’ ಚಿತ್ರ ಇದೇ ಜೂನ್ 24ಕ್ಕೆ ತೆರೆ ಕಾಣಲಿದೆ. ಸದ್ಯ “ತ್ರಿವಿಕ್ರಮ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಭಾನುವಾರ ಸಂಜೆ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿತು.
ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ನಡೆದ “ತ್ರಿವಿಕ್ರಮ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಟರಾದ ರವಿಚಂದ್ರನ್, ಶಿವರಾಜಕುಮಾರ್, ತೆಲುಗು ನಟ ಸುಮನ್, ಡಾಲಿ ಧನಂಜಯ, , ಶರಣ್, ಶೃತಿ, ನಿಶ್ವಿಕಾ ನಾಯ್ಡು, ಶ್ರೀನಗರ ಕಿಟ್ಟಿ, ರವಿಶಂಕರ್ ಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ಮನುರಂಜನ್ ರವಿಚಂದ್ರನ್, ಅಜಯ್ ರಾವ್, ತಾರಾ, ಜೋಗಿ ಪ್ರೇಮ್, ರಕ್ಷಿತಾ, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಡಾರ್ಲಿಂಗ್ ಕೃಷ್ಣ, ವಸಿಷ್ಟ ಸಿಂಹ, ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ಕಲಾವಿದರು ಮತ್ತು ತಂತ್ರಜ್ಞರ ದಂಡೇ ನೆರೆದಿತ್ತು.
“ಸೋಮಣ್ಣ ಫಿಲಂಸ್’ ಬ್ಯಾನರ್‌ನಲ್ಲಿ ರಾಮ್ಕೋ ಸೋಮಣ್ಣ ನಿರ್ಮಾಣದಲ್ಲಿ ಮೂಡಿಬಂದಿರುವ “ತ್ರಿವಿಕ್ರಮ’ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ನಾಯಕ ನಟ ವಿಕ್ರಮ್ ರವಿಚಂದ್ರನ್‌ಗೆ ಆಕಾಂಕ್ಷಾ ಶರ್ಮ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಚಿಕ್ಕಣ್ಣ, ತುಳಸಿ ಶಿವಮಣಿ, ಸಾಧುಕೋಕಿಲ, ಶಿವಮಣಿ, ಆದಿ ಲೋಕೇಶ್ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.