ಮೈಸೂರು: ಮೈತ್ರಿ ಸರ್ಕಾರವು ಬಡವರ ಪರವಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಅನುಕೂಲವು ರಾಜ್ಯದ ಎಲ್ಲಾ ಕುಟುಂಬಗಳಿಗೂ ತಲುಪಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ ಹಾಗೂ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಸಂಯುಕ್ತಾಶ್ರಯದಲ್ಲಿ ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಶ್ರೀ ತ್ರಿಪುರಸುಂದರಿ ಅಮ್ಮನವರ ದೇವಸ್ಥಾನದ ರಾಜಗೋಪುರ ನಿರ್ಮಾಣ ಹಾಗೂ ಸಂರಕ್ಷಣಾ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತ್ರಿಪುರಸಂದರಿ ದೇವಾಲಯವು ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ. ಇದರ ರಾಜಗೋಪುರ ನಿರ್ಮಾಣ ಮತ್ತು ಸಂರಕ್ಷಣಾ ಕಾಮಗಾರಿಗಳ ಅಭಿವೃದ್ಧಿಗೆ 8.50 ಕೋಟಿ ರೂ.ನೀಡಲಾಗಿದೆ. ಕಾಮಗಾರಿಗಳಿಗೆ ಹಣದ ಕೊರತೆಯಾದರೆ ಇನ್ನಷ್ಟು ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಿಕೊಡುತೇ¤ನೆ. ಮೈಸೂರು ಅರಸರು ತಮ್ಮ ಆಳ್ವಿಕೆಯ ಕಾಲದಲ್ಲಿ ಈ ದೇವಿಗೆ ಮೊದಲನೇ ಪೂಜೆ ಸಲ್ಲಿಸುತ್ತಿದ್ದರು ಎಂದರು.
ದೇವಾಲಯದ ಹತ್ತಿರವಿರುವ ಕಲ್ಯಾಣಿಯ ಸಕಲ ಅಭಿವೃದ್ಧಿ ಕಾಮಗಾರಿಗೆ 1.50 ಕೋಟಿ ನೀಡಲಾಗಿದೆ. ಕಲ್ಯಾಣಿಗೆ ಚಪ್ಪಡಿ ಕಲ್ಲುಗಳ ಜೋಡಣೆ, ಮೆಟ್ಟಿಲುಗಳಿಗೆ ಸ್ಲಾಬ್ ಕಲ್ಲುಗಳನ್ನು ಹಾಕಿ ಪುರಾತನ ಶೈಲಿಯಲ್ಲಿ ನಿರ್ಮಿಸುವುದು. ಹೂಳು ತೆಗೆಯುವುದು, ಕಲ್ಯಾಣಿ ಪ್ರವೇಶ ದ್ವಾರಕ್ಕೆ ಕಮಾನು, ಕಾಂಪೌಂಡ್, ಪ್ರವೇಶ ದ್ವಾರಕ್ಕೆ ಗೇಟ್ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಅದನ್ನು ಅಭಿವೃದ್ಧಿಪಡಿಸಿ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ನಾಡಿನ ರೈತರು ನಗು ಮೊಗದಿಂದ ಬದುಕಲು ಕಾಲ ಕಾಲಕ್ಕೆ ಮಳೆ ಆಗಬೇಕು. ರಾಜ್ಯದ ರೈತರು ಆತ್ಮಹತ್ಯೆಗೆ ಪ್ರಯತ್ನಿಸಬೇಡಿ ನಿಮ್ಮ ಪರವಾಗಿ ನಮ್ಮ ಮೈತ್ರಿ ಸರ್ಕಾರ ಇದೆ. ನಿಮಗಾಗಿ ಸಾಲಮನ್ನಾ ಯೋಜನೆ ತರಲಾಗಿದೆ.ರಾಜ್ಯದ 6.50 ಕೋಟಿ ಜನರ ಕಷ್ಟ ಭರಿಸುವ ಶಕ್ತಿಯನ್ನು ನೀಡಲಿ ಎಂದು ತಾಯಿ ಚಾಮುಂಡೇಶ್ವರಿ ಮತ್ತು ತ್ರಿಪುರಸುಂದರಿ ದೇವಿಯರನ್ನು ಪ್ರಾರ್ಥಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್, ಸಣ್ಣ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರುಗಳಾದ ಅಡಗೂರು ಎಚ್.ವಿಶ್ವನಾಥ್, ಎಂ.ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮರಿತಿಬೇºಗೌಡ ಮತ್ತಿತರರು ಉಪಸ್ಥಿತರಿದ್ದರು.