ಗುವಾಹಟಿ: ಚುನಾವಣೆಗೆ ಒಂದು ವರ್ಷ ಇರುವಂತೆ ತ್ರಿಪುರ ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಆದರೆ ಬಿಜೆಪಿಯು ನೂತನ ಮುಖ್ಯಮಂತ್ರಿಯನ್ನು ನೇಮಕ ಮಾಡಿರುವುದು ಪಕ್ಷದ ಕೆಲವು ಶಾಸಕರನ್ನು ಕೆರಳಿಸಿದೆ. ಈ ಬಗ್ಗೆ ಪಕ್ಷದ ನಾಯಕತ್ವವು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕೆಲ ಶಾಸಕರು ಹೇಳಿದ್ದಾರೆ.
ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಬಿಜೆಪಿ, ಮಾಣಿಕ್ ಸಹಾ ಅವರನ್ನು ಸಿಎಂ ಸ್ಥಾನಕ್ಕೆ ನೇಮಿಸಿತು.
ವೃತ್ತಿಯಲ್ಲಿ ದಂತವೈದ್ಯರಾಗಿರುವ 69 ವರ್ಷದ ಸಹಾ ಅವರು ಕಳೆದ ತಿಂಗಳು ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು ತ್ರಿಪುರ ಬಿಜೆಪಿ ಮುಖ್ಯಸ್ಥರೂ ಆಗಿದ್ದಾರೆ.
ಬಿಜೆಪಿ ನೂತನ ಮುಖ್ಯಮಂತ್ರಿಯ ಹೆಸರನ್ನು ಘೋಷಿಸಿದ ಪಕ್ಷದ ಸಮಾರಂಭದಲ್ಲಿ ಪಕ್ಷದ ಶಾಸಕ ಮತ್ತು ರಾಜ್ಯ ಸಚಿವ ರಾಮ್ ಪ್ರಸಾದ್ ಪಾಲ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಅಸಮಾಧಾನ ವ್ಯಕ್ತಪಡಿಸಿದ ಅವರು ನಂತರ ನೆಲದ ಮೇಲೆ ಪ್ಲಾಸ್ಟಿಕ್ ಕುರ್ಚಿಯನ್ನು ಒಡೆದು ಹಾಕುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
Related Articles
ಇದನ್ನೂ ಓದಿ:ನಿರಾತಂಕವಾಗಿ ನಡೆದ ಸಮೀಕ್ಷೆ; ಇಂದು ಜ್ಞಾನವಾಪಿ 2ನೇ ಸುತ್ತಿನ ಸರ್ವೇ
ತ್ರಿಪುರ ರಾಜಮನೆತನದ ಸದಸ್ಯರಾದ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಪಾಲ್ ಬಯಸಿದ್ದರು ಎಂದು ವರದಿಯಾಗಿದೆ.
ಹೊಸ ಮುಖ್ಯಮಂತ್ರಿ ಘೋಷಣೆಯ ಸ್ಥಳದ ಇತರ ದೃಶ್ಯಗಳು ಬಿಜೆಪಿ ಶಾಸಕರು ವಾಗ್ವಾದ ಮಾಡುವುದನ್ನು ತೋರಿಸುತ್ತವೆ, ಕೆಲವರು ಒಬ್ಬರನ್ನೊಬ್ಬರು ತಳ್ಳುವ ದೃಶ್ಯಗಳೂ ಸೆರೆಯಾಗಿದೆ.
ಮುಖ್ಯಮಂತ್ರಿಯನ್ನು ನೇಮಿಸುವ ಮೊದಲು ಪಕ್ಷದೊಳಗೆ ಯಾವುದೇ ಸಮಾಲೋಚನೆ ನಡೆದಿಲ್ಲ ಎಂದು ಬಿಜೆಪಿ ಶಾಸಕ ಪರಿಮಳ್ ದೆಬ್ಬರ್ಮಾ ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ತ್ರಿಪುರದಲ್ಲಿ ಕಾಲಿಡಲು ಯತ್ನಿಸುತ್ತಿರುವ ತೃಣಮೂಲ ಕಾಂಗ್ರೆಸ್ ಬಿಜೆಪಿ ಕಚೇರಿಯ ಹಲವು ದೃಶ್ಯಗಳನ್ನು ಟ್ವೀಟ್ ಮಾಡಿದೆ.