ಅಗರ್ತಲಾ: ತ್ರಿಪುರಾ ವಿಧಾನಸಭೆಗೆ ಭಾನುವಾರ ನಡೆದ ಮತದಾನದಲ್ಲಿ ಶೇ.76ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 60 ಸದಸ್ಯಬಲದ ಅಸೆಂಬ್ಲಿಯ ಪೈಕಿ 59 ಸೀಟುಗಳಿಗೆ ನಡೆದ ಮತದಾನವು ಶಾಂತಿಯುತವಾಗಿ ನೆರವೇರಿದೆ. ಕೆಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಸಿಪಿಎಂ ಅಭ್ಯರ್ಥಿ ರಾಮೇಂದ್ರ ಬರ್ಮಾ ಅವರ ನಿಧನದಿಂದಾಗಿ ಚಾರಿಲಾಮ್ ಕ್ಷೇತ್ರದ ಮತದಾನ ಮುಂದೂಡಲಾಗಿದೆ. ಕಳೆದ ಚುನಾವಣೆಯಲ್ಲಿ ಶೇ.91.82ರಷ್ಟು ದಾಖಲೆಯ ಮತದಾನವಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಶೇ.84.32 ಮಂದಿ ಹಕ್ಕು ಚಲಾಯಿಸಿದ್ದರು. ಇದೇ ವೇಳೆ, ಭಾನುವಾರ ಎರಡು ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಇಲ್ಲಿ ಸಿಪಿಎಂ ಆಡಳಿತ ನಡೆಸುತ್ತಿದ್ದು, ಈ ಬಾರಿ ಸಿಪಿಎಂ ಭದ್ರಕೋಟೆಯನ್ನು ಛಿದ್ರ ಮಾಡಲು ಬಿಜೆಪಿ ಹರಸಾಹಸ ಪಟ್ಟಿದೆ. ಮಾ.3ರಂದು ಫಲಿತಾಂಶ ಪ್ರಕಟವಾಗಲಿದೆ.