ಹೊಸದಿಲ್ಲಿ : ತ್ರಿವಳಿ ತಲಾಕ್ ಪದ್ದತಿಯನ್ನು ಇನ್ನು 18 ತಿಂಗಳ ಒಳಗೆ ಕೊನೆಗೊಳಿಸಲಾಗುವುದು ಎಂದು ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‌ಬಿ) ಇಂದು ಮಂಗಳವಾರ ಹೇಳಿದೆ.
ಎಐಎಂಪಿಎಲ್‌ಬಿ ಉಪಾಧ್ಯಕ್ಷ ಡಾ. ಸಯೀದ್ ಸಾದಿಕ್ ಅವರು ಇಂದು ಈ ಕುರಿತ ಹೇಳಿಕೆಯನ್ನು ನೀಡಿದರು.
ತ್ರಿವಳಿ ತಲಾಕ್‌ನ ವಿವಾದಿತ ವಿಷಯದ ಬಗ್ಗೆ ಮಾತನಾಡಿದ ಡಾ.ಸಾದಿಕ್ ಅವರು ಎಐಎಂಪಿಎಲ್‌ಬಿ ‘ತ್ರಿವಳಿ ತಲಾಕ್ ಪದ್ದತಿಯನ್ನು ತಾನೇ ಕೊನೆಗೊಳಿಸಲಿದೆ; ಹಾಗಾಗಿ ಸರಕಾರ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ’ ಎಂದು ಹೇಳಿದರು.
ಎರಡು ದಿನಗಳ ಹಿಂದಷ್ಟೇ ಎಐಎಂಪಿಎಲ್‌ಬಿ “ದೇಶದಲ್ಲಿನ ಸಮುದಾಯದವದರಲ್ಲಿ ವಿಚ್ಛೇದನವು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ; ದೇಶದಲ್ಲಿನ ಮುಸ್ಲಿಂ ಮಹಿಳೆಯರಿಂದ 3.50 ಕೋಟಿ ಅರ್ಜಿಗಳು ಬಂದಿದ್ದು ತಾವು ಶರೀಯತ್ ಮತ್ತು ತ್ರಿವಳಿ ತಲಾಕ್ ಪದ್ಧತಿಗೆ ನಿಷ್ಠರಾಗಿದ್ದೇವೆ ಎಂದು ಹೇಳಿದ್ದಾರೆ’ ಎಂದು ಹೇಳಿಕೆ ನೀಡಿತ್ತು.
ಈ ನಡುವೆ ದೇಶಾದ್ಯಂತದ ಸುಮಾರು 10 ಲಕ್ಷಕ್ಕೂ ಅಧಿಕ ಮುಸ್ಲಿಮರು ವಿವಾದಿತ ತ್ರಿವಳಿ ತಲಾಕ್ ಕೊನೆಗೊಳಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದರು.
ತ್ರಿವಳಿ ತಲಾಕ್ ಪದ್ಧತಿಯನ್ನು ಕಿತ್ತು ಹಾಕುವಂತೆ ಅನೇಕ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟನ್ನು ಪ್ರವೇಶಿಸಿದ್ದರು.