ರಜೌರಿ/ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಶನಿವಾರ “ಆಪರೇಷನ್ ತ್ರಿನೇತ್ರ’ ಹೆಸರಿನಲ್ಲಿ ಸೇನೆ ಮತ್ತು ಇತರ ಭದ್ರತಾ ಪಡೆಗಳು ಬಿರುಸಿನ ಕಾರ್ಯಾಚರಣೆ ನಡೆಸಿವೆ. ಜಿಲ್ಲೆಯ ಕಂಡಿ ಎಂಬಲ್ಲಿ ಇರುವ ದಟ್ಟ ಅಡವಿಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ, ಐವರು ಯೋಧರು ಹುತಾತ್ಮರಾದ ಬಳಿಕ ಈ ಕಾರ್ಯಚರಣೆ ಕೈಗೆತ್ತಿಕೊಳ್ಳಲಾಗಿದೆ. ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಪಡೆ, ಸಿಆರ್‌ಪಿಎಫ್ ಕೂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.
ಒಂದು ಹಂತದಲ್ಲಿ ಉಗ್ರನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮತ್ತೂಬ್ಬನಿಗೆ ಗಾಯವಾಗಿರುವ ಸಾಧ್ಯತೆಗಳು ಇವೆ ಎಂದು ಜಮ್ಮುವಿನಲ್ಲಿ ಸೇನಾ ಪಡೆಯ ವಕ್ತಾರ ಲೆ.ಕ.ದೇವೇಂದ್ರ ಆನಂದ್ ಹೇಳಿದ್ದಾರೆ. ಅಸುನೀಗಿದ ಉಗ್ರನ ಬಳಿ ಇದ್ದ ಒಂದು ಎ.ಕೆ.56 ರೈಫಲ್, ನಾಲ್ಕು ಮ್ಯಾಗಜೀನ್‌ಗಳು, ಒಂದು 9 ಎಂಎಂ ಪಿಸ್ತೂಲು ಮತ್ತು ಅದಕ್ಕೆ ಸಂಬಂಧಿಸಿದ ಮೂರು ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಯಾವ ಸಂಘಟನೆಯ ಉಗ್ರರು ಎಂಬ ಅಂಶ ಸದ್ಯಕ್ಕೆ ಗೊತ್ತಾಗಿಲ್ಲ ಎಂದೂ ಹೇಳಿದ್ದಾರೆ. 2021ರ ಅಕ್ಟೋಬರ್ ಬಳಿಕ ಅವಧಿಯಲ್ಲಿ ಉಗ್ರರು 35 ಮಂದಿಯನ್ನು ಕೊಂದಿದ್ದಾರೆ. ಈ ಪೈಕಿ 26 ಮಂದಿ ನಾಗರಿಕರು. ಹೆಚ್ಚಿನ ಎಲ್ಲಾ ಘಟನೆಗಳು ರಜೌರಿ ಮತ್ತು ಪೂಂಛ ಜಿಲ್ಲೆಗಳಲ್ಲಿಯೇ ಆಗಿದೆ.
ಇದಕ್ಕಿಂತ ಮೊದಲು ನಾರ್ದರ್ನ್ ಆರ್ಮಿ ಕಮಾಂಡರ್ ಲೆ.ಜ.ಉಪೇಂದ್ರ ದ್ವಿವೇದಿ ಅವರು ಎನ್‌ಕೌಂಟರ್ ಮತ್ತು ಗ್ರೆನೇಡ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಏ.20ರಂದು ಟ್ರಕ್‌ನಲ್ಲಿ ತೆರಳುತ್ತಿದ್ದ ಐವರು ಯೋಧರನ್ನು ಹತ್ಯೆ ಮಾಡಿದ್ದ ಉಗ್ರರು ಕಂಡಿ ಅರಣ್ಯ ಪ್ರದೇಶದಲ್ಲಿ ಇರುವ ಬಗ್ಗೆ ಸುಳಿವು ಸಿಕ್ಕಿದ್ದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಶುರು ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ 250ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿಕೊಂಡು ಯೋಧರನ್ನು ಹತ್ಯೆ ಮಾಡುವ ಹೊಸ ತಂತ್ರ ಬಳಕೆ ಮಾಡುತ್ತಿದ್ದಾರೆ ಎಂದು ಸೇನೆ ದೃಢಪಡಿಸಿದೆ.
ಬಾರಾಮುಲ್ಲಾ ಎನ್‌ಕೌಂಟರ್:
ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಮತ್ತೂಂದು ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರಗಾಮಿಯನ್ನು ಕೊಲ್ಲಲಾಗಿದೆ. ಜಿಲ್ಲೆಯ ಕರ್ಹಾಮಾ ಕುಂಜೀರ್ ಎಂಬಲ್ಲಿ ಆತನ ಇರವಿನ ಬಗ್ಗೆ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಶುರು ಮಾಡಿದ್ದವು. ಒಂದು ಹಂತದಲ್ಲಿ ಗುಂಡಿನ ಚಕಮಕಿ ಶುರುವಾಯಿತು. ಅಂತಿಮವಾಗಿ ಕುಲ್ಗಾಂವ್‌ನ ನಿವಾಸಿಯೇ ಆಗಿರುವ ಅಬಿನ್ ವಾನಿ ಎಂಬಾತ ಜೀವ ಕಳೆದುಕೊಂಡ. ಆತನಿಂದ ಹಲವು ರೀತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
Related Articles
ರಕ್ಷಣಾ ಸಚಿವರ ಭೇಟಿ:
ಐವರು ಯೋಧರು ಹುತಾತ್ಮರಾಗಿರುವಂತೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿಯಿಂದ ಶ್ರೀನಗರಕ್ಕೆ ಧಾವಿಸಿ ಹೋಗಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿನ ಸದ್ಯದ ಭದ್ರತಾ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಶುಕ್ರವಾರ ಹುತಾತ್ಮರಾಗಿರುವ ಐವರು ಯೋಧರ ತ್ಯಾಗವನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕೇಂದ್ರಾಡಳಿತ ಜಿಲ್ಲೆಯಲ್ಲಿ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ್ದೇನೆ. ಯೋಧರ ಸನ್ನದ್ಧ ಸ್ಥಿತಿಯನ್ನು ಗಮನಿಸಿದ್ದೇನೆ ಮತ್ತು ಅವರ ಜತೆಗೆ ಮಾತುಕತೆ ನಡೆಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಭೂಸೇನೆಯ ಮುಖ್ಯಸ್ಥ ಜ.ಮನೋಜ್ ಪಾಂಡೆ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರ ಮೂಲಕ ರಜೌರಿಗೆ ಆಗಮಿಸಿದ್ದಾರೆ. ಅಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ಸಭೆಯನ್ನೂ ನಡೆಸಿದ್ದಾರೆ.
ಜೌರಿಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಧರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು ಮತ್ತು ಅವರಿಗೆ ಧೈರ್ಯ ತುಂಬಿದರು.