ತನ್ನ ಟೈಟಲ್, ಪೋಸ್ಟರ್ ಮತ್ತು ಟ್ರೇಲರ್‌ಗಳ ಮೂಲಕ ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ ಚಿತ್ರ “ತ್ರಿಕೋನ’ ಇದೇ ಏ. 1ಕ್ಕೆ ತೆರೆಗೆ ಬರುತ್ತಿದೆ.
ಸಾಮಾನ್ಯವಾಗಿ ಕಲಾತ್ಮಕ ಕಥಾಹಂದರದ ಸಿನಿಮಾಗಳು ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪುವುದಿಲ್ಲ ಎಂಬ ಮಾತಿದೆ. ಆದರೆ ಕಲಾತ್ಮಕ ಸಿನಿಮಾದಲ್ಲಿರುವಂಥ ಕಥೆಯನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದರೆ ಅದು ಹೆಚ್ಚು ಪ್ರೇಕ್ಷಕರನ್ನು ತಲುಪುತ್ತದೆ ಎಂಬುದು “ತ್ರಿಕೋನ’ ಚಿತ್ರದ ಅಭಿಪ್ರಾಯ. ಅದಕ್ಕಾಗಿ “ತ್ರಿಕೋನ’ ಸಿನಿಮಾದಲ್ಲಿ ಅಂಥದ್ದೇ ಅಪರೂಪದ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ಇಷ್ಟವಾಗುವಂತೆ, ಕ್ಲಾಸ್ ಸ್ಟೋರಿಗೆ ಮಾಸ್ ಟಚ್ ಕೊಟ್ಟು ಅದನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುವುದು “ತ್ರಿಕೋನ’ ಚಿತ್ರತಂಡ ಮಾತು.
ಇದನ್ನೂ ಓದಿ:ಶಂಕರನ ಹಾಡು ಕುಣಿತ: ಹೊಸಬರ ಚಿತ್ರ ರಿಲೀಸ್ ಗೆ ರೆಡಿ
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಂದ್ರಕಾಂತ್, “ಸಿನಿಮಾದ ಟೈಟಲ್ಲೇ ಹೇಳುವಂತೆ, “ತ್ರಿಕೋನ’ ಮೂರು ಜನರೇಶನ್ ದೃಷ್ಟಿಕೋನ ಇರುವಂಥ ಸಿನಿಮಾ. 65, 45, 25 ಹೀಗೆ ಮೂರು ಜನರೇಶನ್ ನವರ ಕಥೆ ಇದರಲ್ಲಿದೆ. ಈ ಮೂರು ಜನರೇಶನ್‌ಗೂ ಕನೆಕ್ಟ್ ಆಗುವಂಥ ತಾಳ್ಮೆ, ಅಹಂ, ಶಕ್ತಿ ಈ ಮೂರು ವಿಷಯಗಳನ್ನು ಹೇಳಿದ್ದೇವೆ. ಸಿನಿಮಾದಲ್ಲೂ ಮೂರು ತಲೆಮಾರುಗಳನ್ನು ಪ್ರತಿನಿಧಿಸುವ ಕಲಾವಿದರಿದ್ದಾರೆ. ಹಿರಿಯ ನಟಿ ಜ್ಯೂಲಿ ಲಕ್ಷ್ಮೀ, ಸುರೇಶ್ ಹೆಬ್ಳೀಕರ್, ಅಚ್ಯುತ ಕುಮಾರ್, ಸುಧಾರಾಣಿ, ಮಾರುತೇಶ್, ಹೀಗೆ ಹಿರಿಯರಿಂದ ಕಿರಿಯರವರೆಗೆ ಎಲ್ಲ ವಯೋಮಾನದ ಕಲಾವಿದರಿದ್ದಾರೆ. ಹಾಗಾಗಿ “ತ್ರಿಕೋನ’ ಎಲ ಜನರೇಶನ್ ಆಡಿಯನ್ಸ್‌ಗೂ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ.
“ಪೋಲಿಸ್ ಪ್ರಕಿ ಪ್ರೊಡಕ್ಷನ್ಸ್ ‘ಬ್ಯಾನರ್‌ನಲ್ಲಿ ರಾಜಶೇಖರ್ ಕಥೆ ಬರೆದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಭರ್ಜರಿಯಾಗಿ ಪ್ರಚಾರದಲ್ಲಿ ನಿರತವಾಗಿರುವ “ತ್ರಿಕೋನ’ ಚಿತ್ರಕ್ಕೆ ಸಿನಿಪ್ರಿಯರು ಮತ್ತು ಚಿತ್ರರಂಗದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತೆರೆಗೆ ಬರೋದಕ್ಕೂ ಮೊದಲೇ ಒಂದಷ್ಟು ಸುದ್ದಿಯಾಗುತ್ತಿರುವ “ತ್ರಿಕೋನ’ ತೆರೆಮೇಲೆ ಹೇಗಿರಲಿದೆ ಅನ್ನೋದು ಮುಂದಿನವಾರ ಗೊತ್ತಾಗಲಿದೆ.