ಕಲಬುರಗಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮರಕಜಿ ಸೀರತ್ ಕಮಿಟಿ ನಿಯೋಗ ಪೊಲೀಸ್ ಭವನಕ್ಕೆ ತೆರಳಿ ಎಸ್‌ಪಿ ಎನ್. ಶಶಿಕುಮಾರ ಅವರಿಗೆ ಮನವಿ ಸಲ್ಲಿಸಿತು.
ನಗರದ ಟಿಪ್ಪು ಸುಲ್ತಾನ ಚೌಕ್‌ನಲ್ಲಿ ಫೆ.17 ರಂದು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಸಿದ್ದತೆ ಮಾಡಿಕೊಳ್ಳುತ್ತಿದ್ದ ಹಲವು ಮುಸ್ಲಿಂ ಯುವಕರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು, ದೌರ್ಜನ್ಯ ಎಸಗಿದ್ದಾರೆ.
ಮೊಹ್ಮದ ಹುಸೇನ, ತಲಾಹ್ ಹುಸೇನ ಸೇರಿ ಹಲವರು ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂವಿಧಾನಬದ್ದ ಹಕ್ಕಿನಡಿ ಸಂಘಟನೆಯ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದರೂ ಸಹ ಅಂಥವರನ್ನು ಬಂಧಿಸಿ ದೌರ್ಜನ್ಯವೆಸಗಿದ್ದು ಖಂಡನೀಯ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಜೇವರ್ಗಿ, ಶಹಾಬಾದ, ವಾಡಿ, ದೇವಲಗಾಣಗಾಪುರ ಹಾಗೂ ಆಳಂದ ಪಟ್ಟಣದಲ್ಲಿ ಹೋಲಿ ಕಾಬಾದ ಮೇಲೆ ಅಶೀÉಲ್ ಚಿತ್ರವನ್ನು ಅಂಟಿಸಿ ಪೋಸ್ಟ್ ಮಾಡುವ ಮೂಲಕ ಕೋಮು ಪ್ರಚೋದನೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದು, ಅಂತಹವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ಕುಡಾ ಮಾಜಿ ಅಧ್ಯಕ್ಷ ಮಹ್ಮದ ಅಜಗರ್ ಅಲಿ ಚುಲಬುಲ್, ಮೇಯರ್ ಸೈಯ್ಯದ್ ಅಹ್ಮದ,ಅಬ್ದುಲ್ ಖದೀರ್ ಚೊಂಗೆ, ಮೊಹ್ಮದ್ ಜಾಹೇದ್, ಅಬ್ದುಲ್ ರಹೀಮ್ ಮಿರ್ಚಿ, ವಾಹೇಸ್ ಅಲಿ ಫತೇಖಾನಿ, ಆದೀಲ್ ಸುಲೇಮಾನ, ನಜಮುಲ್ ಇಸ್ಲಾಂ ಅಹ್ಮದ್, ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ ಹಾಗೂ ಇತರರು ಹಾಜರಿದ್ದರು.