ಚಿತ್ರದುರ್ಗ: ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ದೊರೆಯದಿರುವುದು ದೌರ್ಭಾಗ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಹಿರಿಯೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಕಾಡುಗೊಲ್ಲರ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಡುಗೊಲ್ಲರಿಗೆ ಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕಾಡುಗೊಲ್ಲ ಸಮುದಾಯ ಹಟ್ಟಿಗಳಲ್ಲಿ ವಾಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಮುಂದೆ ನಮ್ಮ ಸರ್ಕಾರ ಬಂದಾಗ ಎಲ್ಲವನ್ನೂ ಕಂದಾಯ ಗ್ರಾಮ ಮಾಡುತ್ತೇವೆ ಎಂದರು.
ಇಂದಿನ ರಾಜಕೀಯ ಬದಲಾಗಿದೆ. ಚುನಾವಣಾ ಸಂದರ್ಭಗಳಲ್ಲಿ ಭರವಸೆ ನೀಡಿ ನಂತರ ಮರೆತು ಹೋಗುತ್ತಿದ್ದಾರೆ. ನಿಮ್ಮ ಹೋರಾಟದ ಜತೆಗೆ ನಾವಿದ್ದೇವೆ. ನಿಮ್ಮ ಬೇಡಿಕೆಗಳನ್ನು ನಿರಂತರವಾಗಿ ಎಲ್ಲ ನಾಯಕರ ಮುಂದೆ ತರುತ್ತಿರಬೇಕು. ಕಾಡುಗೊಲ್ಲರನ್ನು ಎಂಎಲ್ಸಿ, ಎಂಎಲ್‌ಎ ಮಾಡಿರುವುದು ಕಾಂಗ್ರೆಸ್ ಪಕ್ಷ. ನಿಮ್ಮ ಹಕ್ಕು ನಿಮಗೆ ಸಿಗಬೇಕು. ನಿಮ್ಮ ಪ್ರತಿನಿಧಿತ್ವ ವ್ಯವಸ್ಥೆಯಲ್ಲಿರಬೇಕು ಎಂದು ಆಶಿಸಿದರು.
ಸಂವಾದದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಕಾರ್ಯದರ್ಶಿ ಮಯೂರ್ ಜಯಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಅಭ್ಯರ್ಥಿಗಳಾದ ಡಿ.ಸುಧಾಕರ್, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಟಿ.ಬಿ.ಜಯಚಂದ್ರ, ಎಂಎಲ್ಸಿ ನಾಗರಾಜ್ ಯಾದವ್, ಗೀತಾ ನಂದಿನಿಗೌಡ, ರಾಜ್ಯಸಭಾ ಸದಸ್ಯೆ ರಂಜಿತಾ ರಂಜನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಇದ್ದರು.
Related Articles
ಕಾಡುಗೊಲ್ಲ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪಶುಪಾಲನೆ, ಕಾಡು-ಮೇಡುಗಳಲ್ಲಿ ವಾಸಿಸುವ ಸಮುದಾಯ. ಆದರೆ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಸರಿಯಾಗಿ ಗುರುತಿಸಿಲ್ಲ.
– ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ
ಕಾಡುಗೊಲ್ಲರ ಆಚಾರ-ವಿಚಾರ ಭಿನ್ನ. ಹಟ್ಟಿಗಳನ್ನು ಕಟ್ಟಿಕೊಂಡು ವಾಸಿಸುತ್ತೇವೆ. ನಮ್ಮ ಸಮುದಾಯಕ್ಕೆ ಶಿಕ್ಷಣದ ಕೊರತೆ ಇದ್ದು, ರಾಜಕೀಯ ಸ್ಥಾನಮಾನಗಳು ಸಿಕ್ಕಿಲ್ಲ. ಹಾಗಾಗಿ ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸಬೇಕು.
– ಜಯಮ್ಮ ಬಾಲರಾಜ್, ವಿಧಾನ ಪರಿಷತ್ ಮಾಜಿ ಸದಸ್ಯೆ
ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾಡುಗೊಲ್ಲರ ಸಂಖ್ಯೆ ಹೆಚ್ಚಾಗಿದ್ದರೂ ನಿರ್ಲಕ್ಷéಕ್ಕೊಳಗಾಗಿದ್ದಾರೆ. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ ಇದೆ.
– ಎ.ವಿ. ಉಮಾಪತಿ, ಮಾಜಿ ಶಾಸಕ
ರಾಜ್ಯದಲ್ಲಿ ಕಾಡುಗೊಲ್ಲರದು ನೊಂದ ಸಮುದಾಯವಾಗಿದ್ದರೂ ಪರಿಶಿಷ್ಟರ ಸ್ಥಾನ ಸಿಕ್ಕಿಲ್ಲ. ಕೇಂದ್ರಕ್ಕೆ ಶಿಫಾರಸಾಗಿ ಎಂಟು ವರ್ಷವಾದರೂ ಮೀಸಲಾತಿ ಜಾರಿಯಾಗಿಲ್ಲ.
– ಮಹೇಶ್, ಕಾಡುಗೊಲ್ಲ ಸಮುದಾಯದ ಮುಖಂಡ