ಹೈದರಾಬಾದ್: ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ಗಾಗಿ ಕಾಯುತ್ತಿದ್ದ ಆದಿವಾಸಿ ಗರ್ಭಿಣಿ ಮಹಿಳೆಯೊಬ್ಬರು ರಸ್ತೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತೆಲಂಗಾಣದ ನಿರ್ಮಲಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Madhumita Shukla ಹತ್ಯೆ: 17 ವರ್ಷದ ಬಳಿಕ ಮಧುಮಣಿ ತ್ರಿಪಾಠಿ ದಂಪತಿಗೆ ಬಿಡುಗಡೆ ಭಾಗ್ಯ
ಆದಿವಾಸಿ ಮಹಿಳೆಯ ಕುಟುಂಬ ಸದಸ್ಯರು ಆಂಬುಲೆನ್ಸ್ ಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು ಕೂಡಾ ಸೂಕ್ತ ಸಮಯಕ್ಕೆ ಬಾರದ ಪರಿಣಾಮ ಆಕೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿರುವುದಾಗಿ ವರದಿ ವಿವರಿಸಿದೆ.
ತೆಲಂಗಾಣದ ಕುಗ್ರಾಮದ ತುಳಸಿಪೇಟ್ ನಿವಾಸಿ ಗಂಗಾಮಣಿ ಎಂಬಾಕೆಗೆ ಗುರುವಾರ (ಆಗಸ್ಟ್ 24) ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಗ್ರಾಮಕ್ಕೆ ಸಮರ್ಪಕವಾದ ರಸ್ತೆ ಸಂಪರ್ಕ ಇಲ್ಲದ ಕಾರಣ, ಮಹಿಳೆಯ ಕುಟುಂಬ ಸದಸ್ಯರು ಗಂಗಾಮಣಿಯನ್ನು ಸ್ಥಳೀಯರ ನೆರವಿನೊಂದಿಗೆ ಸಮೀಪದ ರಸ್ತೆವರೆಗೆ ಕರೆದುಕೊಂಡು ಬಂದಿದ್ದರು. ನಂತರ ಆಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಆಂಬುಲೆನ್ಸ್ ನಲ್ಲಿ ಪೆಟ್ರೋಲ್ ಇಲ್ಲ ಎಂದು ಚಾಲಕ ತಿಳಿಸಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ.
ಗಂಗಾಮಣಿ ಹೆರಿಗೆ ನೋವಿನಲ್ಲಿ ಒದ್ದಾಡುತ್ತಲೇ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಆಂಬುಲೆನ್ಸ್ ಬಂದಿರುವುದಾಗಿ ವರದಿ ತಿಳಿಸಿದೆ. ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ತುಳಸಿಪೇಟ್ ಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಹಿಳೆ ಮತ್ತು ಮಗು ಆರೋಗ್ಯವಂತರಾಗಿದ್ದು, ಇಬ್ಬರನ್ನೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ವರದಿ ಹೇಳಿದೆ. ಆದಿವಾಸಿ ಮಹಿಳೆ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿರುವ ವಿಡಿಯೋ ಅಂತರ್ಜಾಲ ಜಾಲತಾಣದಲ್ಲಿ ಹರಿದಾಡುತ್ತಿದೆ.