ದುಮ್ಕಾ(ಜಾರ್ಖಂಡ್) : ಒಳನುಸುಳುವಿಕೆಯಿಂದಾಗಿ ಸಂತಾಲ್ ಪರಗಣದಲ್ಲಿ ಬುಡಕಟ್ಟು ಜನಸಂಖ್ಯೆಯು ಕಡಿಮೆಯಾಗುತ್ತಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಜಾರ್ಖಂಡ್ ನ ಜೆಎಂಎಂ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ನುಸುಳುಕೋರರ “ಪೋಷಕ” ಎಂದು ಆರೋಪಿಸಿದ್ದಾರೆ.
ಮಂಗಳವಾರ ದುಮ್ಕಾದಲ್ಲಿ ಚುನಾವಣ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ನುಸುಳುಕೋರರು ಭೂಮಿಯನ್ನು ಆಕ್ರಮಿಸುತ್ತಿದ್ದಾರೆ ಮತ್ತು ಮಹಿಳೆಯರನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಜೆಎಂಎಂ ಮತ್ತು ಕಾಂಗ್ರೆಸ್ ಅತಿರೇಕದ ಲೂಟಿಯಲ್ಲಿ ತೊಡಗಿವೆ’ ಎಂದು ಕಿಡಿ ಕಾರಿದರು.
2022 ರಲ್ಲಿ ಸಂಭವಿಸಿದ ಎರಡು ಘಟನೆಗಳನ್ನು ಉಲ್ಲೇಖಿಸಿದ ಮೋದಿ, “ಬುಡಕಟ್ಟು ಹೆಣ್ಣು ಮಕ್ಕಳನ್ನು 50 ತುಂಡುಗಳಾಗಿ ಕತ್ತರಿಸಲಾಗುತ್ತಿದೆ. ಜೀವಂತವಾಗಿ ಸುಟ್ಟುಹಾಕಲಾಗುತ್ತಿದೆ. ನಾಲಗೆಯನ್ನು ಕಿತ್ತುಹಾಕಲಾಗಿದೆ. ಆದಿವಾಸಿ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿರುವ ಇವರು ಯಾರು? ಜೆಎಂಎಂ ಸರ್ಕಾರ ಅವರನ್ನು ಏಕೆ ಪೋಷಿಸುತ್ತಿದೆ? “ಲವ್ ಜಿಹಾದ್” ಜಾರ್ಖಂಡ್‌ನಿಂದ ಪ್ರಾರಂಭವಾಯಿತು ಎಂದು ಪ್ರಧಾನಿ ಆಕ್ರೋಶ ಹೊರ ಹಾಕಿದರು.
ಜೆಎಂಎಂ “ಕೋಮು ರಾಜಕೀಯ” ದಲ್ಲಿ ತೊಡಗಿದೆ, ಬ್ರಿಟಿಷರ ಆಳ್ವಿಕೆಯಿಂದ ಭಾನುವಾರ ರಜಾದಿನವಾಗಿದ್ದರೂ, ಜಾರ್ಖಂಡ್ ಜಿಲ್ಲೆಯ ಒಂದು ಜಿಲ್ಲೆಯಲ್ಲಿ ಅದನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ. ಭಾನುವಾರವು ಹಿಂದೂಗಳಿಗೆ ಸಂಬಂಧಿಸಿಲ್ಲ ಆದರೆ ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದೆ. ಇದು 200-300 ವರ್ಷಗಳಿಂದ ರಜಾದಿನವಾಗಿದೆ. ಈಗ ಅವರು ಕ್ರೈಸ್ತರೊಂದಿಗೂ ಜಗಳವಾಡುತ್ತಿದ್ದಾರೆ ಎಂದರು.
‘ಜೂನ್ 4 ರ ನಂತರ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮವನ್ನು ತೀವ್ರಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಪ್ರತಿಜ್ಞೆ ಮಾಡಿದರು.