ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಗ್ರಾಮದಲ್ಲಿ ರಾತ್ರಿಯ ವೇಳೆ ಮನೆಯೊಂದಕ್ಕೆ ಅಕ್ರಮವಾಗಿ ನುಗ್ಗಿ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ವ್ಯಕ್ತಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಹರೇಕಳ ಕೊಜಪಾಡಿ ನಿವಾಸಿ ನೌಫಲ್ ( 32) ಎಂದು ಗುರುತಿಸಲಾಗಿದೆ.
ಸ್ಥಳೀಯ ಮಹಿಳೆ ಮತ್ತು ಮಕ್ಕಳು ಬುಧವಾರದಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಊಟ ಮಾಡಿ ಮಲಗಿದ್ದು, ಮಧ್ಯರಾತ್ರಿಯ ವೇಳೆಗೆ ಮಹಿಳೆಯ ಕೈ ಮತ್ತು ಕಾಲನ್ನು ಯಾರೋ ಸವರಿದ ಅನುಭವವಾಗಿತ್ತು. ಮಹಿಳೆ ಎದ್ದು ದೀಪ ಹಾಕಿದಾಗ ಆರೋಪಿ ಮಂಚದಡಿಯಿಂದ ಎದ್ದು ಹಿಂಬಾಗಿಲ ಮೂಲಕ ಓಡಿ ಹೋಗಿದ್ದನು. ಮನೆಯ ಹೆಂಚು ತೆಗೆದು ಒಳನುಗ್ಗಿರುವ ಆರೋಪಿಯ ವಿರುದ್ಧ ಮಹಿಳೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಗುರುವಾರದಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಹಿಳೆಯ ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿರುವ ಮಾಹಿತಿಯಂತೆ ಮಹಿಳೆಯ ಮನೆಗೆ ನುಗ್ಗಿದ್ದು, ಈತ ಈ ಹಿಂದೆಯೂ ಸ್ಥಳೀಯವಾಗಿ ಬಚ್ಚಲುಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿರುವ ದೂರುಗಳಿವೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.