Advertisement

ನಾಲ್ಕು ವರ್ಷಗಳಲ್ಲಿ 1,671 ಮರಗಳ ಹನನ

02:36 PM Oct 25, 2022 | Team Udayavani |

ಬೆಂಗಳೂರು: ದಿನದಿಂದ ದಿನಕ್ಕೆ ಕಾಂಕ್ರೀಟ್‌ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ಹಸಿರು ಕಡಿಮೆಯಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಮರಗಳನ್ನು ಕಡಿಯಲಾಗುತ್ತಿದ್ದು, ಕಳೆದ 4 ವರ್ಷಗಳಲ್ಲಿ ವಿವಿಧ ಯೋಜನೆಗಳಿಗಾಗಿ 1,671 ಮರಗಳನ್ನು ಬಿಬಿಎಂಪಿ ಕಡಿದಿದೆ.

Advertisement

2014ರಲ್ಲಿ ಐಐಎಸ್ಸಿ ಸಿದ್ಧಪಡಿಸಿದ ವರದಿ ಪ್ರಕಾರ ಬೆಂಗಳೂರಿನಲ್ಲಿ ಕೇವಲ 14 ಲಕ್ಷ ಮರಗಳಿವೆ. ಅದರಲ್ಲೂ 16 ವ್ಯಕ್ತಿಗೆ ಒಂದು ಮರವಿದೆ. ಇದು ಹೀಗೆ ಮುಂದುವರಿದರೆ ಮರಗಳ ಸಂಖ್ಯೆ ಕಡಿಮೆಯಾಗಿ ಹಸಿರೀಕರಣ ಕುಸಿಯುವುದರ ಜತೆಗೆ ಮಾಲಿನ್ಯ ಪ್ರಮಾಣವೂ ಹೆಚ್ಚಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಆದರೂ ಅಭಿವೃದ್ಧಿ ಕಾಮಗಾರಿಗಳು ಸೇರಿ ಇನ್ನಿತರ ಕಾರಣಕ್ಕಾಗಿ ನಗರದಲ್ಲಿ ಮರಗಳ ಹನನ ಹೆಚ್ಚುತ್ತಿದೆ. 2019-20ರಿಂದ 2022-23ರ ಈವರೆಗೆ 1,671 ಮರಗಳನ್ನು ತೆರವು ಮಾಡಲಾಗಿದೆ.

ಆ ಮೂಲಕ ಹಸಿರು ಮತ್ತಷ್ಟು ಕಡಿಮೆಯಾಗುವಂತೆ ಮಾಡಲಾಗಿದೆ. ಬೆಂಗಳೂರಿನ ಮೇಲ್ಸೇತುವೆ ನಿರ್ಮಾಣ, ರಸ್ತೆ ಅಗಲೀಕರಣ, ನಮ್ಮ ಮೆಟ್ರೋ ಕಾಮಗಾರಿ ಹೀಗೆ ಹಲವು ಕಾರಣಗಳಿಗಾಗಿ ಮರಗಳನ್ನು ಕಡಿಯಲಾ ಗುತ್ತದೆ. ಅದಕ್ಕಾಗಿ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಅರ್ಜಿ ಸಲ್ಲಿಸಿದ ನಂತರ ಬಿಬಿಎಂಪಿ ಅರಣ್ಯ ವಿಭಾಗ ನೇಮಿಸುವ ಸಿಬ್ಬಂದಿಯೇ ಮರಗಳನ್ನು ಕಡಿಯುತ್ತಾರೆ. ಅಲ್ಲದೆ, ಖಾಸಗಿ ವ್ಯಕ್ತಿಗಳು ಮರಗಳನ್ನು ಕಡಿಯದಂತೆ ನಿರ್ಬಂಧವನ್ನೂ ವಿಧಿಸಲಾಗಿದೆ.

2019-20ರಲ್ಲಿ ಹೆಚ್ಚು ಮರಗಳ ಹನನ: ಹೀಗೆ ಬೆಂಗಳೂರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮರಗಳನ್ನು ಕಡಿದಿರುವುದರಲ್ಲಿ 2019-20ರಲ್ಲಿಯೇ ಹೆಚ್ಚು. ಆ ವರ್ಷ 632 ಮರಗಳನ್ನು ಕಡಿಯಲಾಗಿದೆ. ಉಳಿದಂತೆ ಪ್ರಸಕ್ತ ವರ್ಷದಲ್ಲಿ ಈಗಾಗಲೇ 535 ಮರಗಳನ್ನು ಕಡಿಯಲಾಗಿದೆ. ನಮ್ಮ ಮೆಟ್ರೋ ಯೋಜನೆಗಾಗಿ ಕಳೆದ 4 ವರ್ಷಗಳಲ್ಲಿ 169 ಮರಗಳನ್ನು ಹನನ ಮಾಡಲಾಗಿದ್ದು, ಬೈಯಪ್ಪನಹಳ್ಳಿ ರೈಲ್ವೆ ಯೋಜನೆಗಾಗಿ 24 ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ಒಂದು ಮರ ಕಡಿದರೆ ಅದಕ್ಕೆ ಬದಲಾಗಿ 5 ಸಸಿ ಗಳನ್ನು ನೆಡಬೇಕು ಎಂಬ ನಿಯಮವಿದೆ. ಅದರಂತೆ 2016-17ರಿಂದೀಚೆಗೆ ಬಿಬಿಎಂಪಿ 3,93,923 ಸಸಿಗಳನ್ನು ನೆಟ್ಟಿದೆ. ಅದರಲ್ಲಿ 2018-19 ಮತ್ತು 2021-22ರಲ್ಲಿ ಒಂದೂ ಸಸಿಯನ್ನು ನೆಟ್ಟಿಲ್ಲ. ಅಲ್ಲದೆ, ಸಸಿ ನೆಡುವ ಬಿಬಿಎಂಪಿ ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಆರೋಪವಿದೆ.

ಹೀಗಾಗಿ 3.94 ಲಕ್ಷ ಸಸಿಗಳ ಪೈಕಿ ಶೇ. 20ಕ್ಕೂ ಹೆಚ್ಚಿನ ಸಸಿಗಳ ನಾಶವಾಗಿವೆ ಎಂದು ಅಂದಾಜಿಸಲಾಗುತ್ತಿದೆ. 2022-23ರಲ್ಲಿ 2 ಲಕ್ಷ ಸಸಿ ನೆಡುವ ಕುರಿತು ಬಿಬಿಎಂಪಿ ಅರಣ್ಯ ವಿಭಾಗ ಗುರಿ ನಿಗದಿ ಮಾಡಿಕೊಂಡಿದೆ. ಅದಕ್ಕಾಗಿ ಬೊಮ್ಮನಹಳ್ಳಿಯ ಕೂಡ್ಲು, ಮಹದೇವಪುರದ ಕೆಂಪಾಪುರ, ಯಲಹಂಕದ ಅಟ್ಟೂರು ಮತ್ತು ರಾಜರಾಜೇಶ್ವರಿ ನಗರದ ಜ್ಞಾನಭಾರತಿಯಲ್ಲಿ ಬಿಬಿಎಂಪಿ ನರ್ಸರಿ ಮೂಲಕ ಸಸಿಗಳನ್ನು ಪೂರೈಸುವುದಾಗಿಯೂ ತಿಳಿಸಲಾಗಿದೆ. ಆದರೆ, 2 ಲಕ್ಷ ಸಸಿ ನೆಡುವ ಗುರಿಯನ್ನಿಟ್ಟುಕೊಂಡು ನರ್ಸರಿಗಳಲ್ಲಿ 71,500 ಸಸಿಗಳನ್ನು ಮಾತ್ರ ಬೆಳಸಲಾಗಿದೆ. ಇದನ್ನು ಗಮನಿಸಿದರೆ ನಗರದಲ್ಲಿ ಹಸಿರು ಹೆಚ್ಚಿಸಲು ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಇಚ್ಛಾಶಕ್ತಿಯೇ ಇಲ್ಲದಂತಾಗಿದೆ.

Advertisement

ಮರ ಗಣತಿಗೆ ಗ್ರಹಣ : ನಗರದಲ್ಲಿ ಮರಗಳ ಸಂಖ್ಯೆ ಹಾಗೂ ಯಾವ ಜಾತಿಯ ಮರಗಳಿಗೆ ಎಂಬುದನ್ನು ಪತ್ತೆ ಮಾಡಲು ಮರಗಣತಿ ಮಾಡುವ ಕುರಿತು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಬಿಬಿಎಂಪಿ ಯೋಜನೆ ರೂಪಿಸಿತ್ತು. ಅದಕ್ಕೆ ಸಂಬಂಧಿಸಿದಂತೆ 5 ಕೋಟಿ ರೂ. ಹಣವನ್ನೂ ಮೀಸಲಿಟ್ಟು ಜಿಕೆವಿಕೆ ಮೂಲಕ ಗಣತಿ ಕಾರ್ಯ ನಡೆಸುವುದಾಗಿ ಅಧಿಕಾರಿಗಳು ಘೋಷಿಸಿದ್ದರು. ಆದರೆ, ಕೊರೊನಾ ಸೇರಿ ಇನ್ನಿತರ ಕಾರಣ ನೀಡಿ ಮರಗಣತಿ ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರಾಸಕ್ತಿವಹಿಸಿದರು.

 

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next