Advertisement

ಪಾಲಿಕೆ ನಿರ್ಲಕ್ಷ್ಯದಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಗಿಡಗಳು

03:30 AM Jun 05, 2018 | Team Udayavani |

ಮಹಾನಗರ: ಭವಿಷ್ಯದಲ್ಲಿ ಮಂಗಳೂರು ನಗರ ಹಸಿರೀಕರಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಹಾನಗರ ಪಾಲಿಕೆ ಕೂಡ ಈ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ನಗರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಸಾವಿರಾರು ಗಿಡ ನೆಟ್ಟಿದ್ದು, ಇದರಲ್ಲಿ ಅನೇಕ ಗಿಡಗಳಿಂದು ನಿರ್ವಹಣೆಯ ಕೊರತೆಯಿಂದ ಸಾವನ್ನಪ್ಪುತ್ತಿರುವುದು ವಿಪರ್ಯಾಸ. ಪಾಲಿಕೆಯು ನಗರದ KSRTC ಬಸ್‌ ನಿಲ್ದಾಣದಿಂದ ಕುಂಟಿಕಾನ ದೇರೆಬೈಲು ಡಿವೈಡರ್‌ – ಸರ್ಕ್ಯೂಟ್‌ ಹೌಸ್‌ ನಿಂದ ಕೆಪಿಟಿ ಮರಕಡ ಡಿವೈಡರ್‌ ವರೆಗೆ, ಕ್ಲಾಕ್‌ ಟವರ್‌ ನಿಂದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ವೃತ್ತ, ಎ.ಬಿ. ಶೆಟ್ಟಿ ವೃತ್ತದಿಂದ ಪಾಂಡೇಶ್ವರ, ಲೇಡಿಹಿಲ್‌ ಸರ್ಕಲ್‌ ರಸ್ತೆಯಿಂದ ಕೊಟ್ಟಾರ ಜಂಕ್ಷನ್‌ ರಸ್ತೆ ವಿಭಾಜಕಗಳಲ್ಲಿ ಗಿಡಗಳನ್ನು ನೆಟ್ಟಿದೆ.

Advertisement

ನಿರ್ವಹಣೆಯಲ್ಲಿ ಬೇಜವಾಬ್ದಾರಿತನ
ನೆಟ್ಟಂತಹ ಸಾವಿರಾರು ಗಿಡಗಳ ಪೈಕಿ ಗಿಡಗಳು ಸದ್ಯ ಬದುಕುಳಿದಿಲ್ಲ. ನಗರದ ಟೌನ್‌ ಹಾಲ್‌ ಮುಂಭಾಗ ಕ್ಲಾಕ್‌ ಟವರ್‌ ವೃತದ ಬಳಿ ಪಾಲಿಕೆ ವತಿಯಿಂದ ಗಿಡಗಳನ್ನು ನೆಡಲಾಗಿದೆ. ಆದರೆ, ಇದರಲ್ಲಿ ಅನೇಕ ಗಿಡಗಳು ಸಾವನ್ನಪ್ಪಿದೆ. ಬದುಕುಳಿಯದ ಗಿಡಗಳ ಬದಲು ಬೇರೆ ಗಿಡ ನೆಡಲು ಕೂಡ ಪಾಲಿಕೆ ನಿರ್ಲಕ್ಷ್ಯ ತೋರಿದೆ. ಇನ್ನು, ಸ್ಟೇಟ್‌ ಬ್ಯಾಂಕ್‌ ಸಮೀಪದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ವೃತ್ತ ಸಮೀಪ ಕೆಲವು ಪ್ರದೇಶಗಳಲ್ಲಿ ಒಂದು ಗಿಡದಿಂದ ಮತ್ತೂಂದು ಗಿಡಕ್ಕೆ ಸುಮಾರು 20 ಅಡಿ ಅಗಲ ಕಾಯ್ದುಕೊಳ್ಳಲಾಗಿದೆ. ಇವಿಷ್ಟೇ ಅಲ್ಲದೆ, ಕಳೆದ ಕೆಲ ತಿಂಗಳ ಹಿಂದೆ ಬಿಸಿಲಿಗೆ ಒಣಗಿ ಹೋಗಿದ್ದ ಗಿಡಗಳು ಇತ್ತೀಚೆಗೆ ನಗರದಲ್ಲಿ ದಾಖಲಾದ ಧಾರಾಕಾರ ಮಳೆಯಿಂದ ಚಿಗುರೊಡೆದಿದೆ.

ರಸ್ತೆ ವಿಭಾಜಕಗಳಲ್ಲಿ ಗಿಡಗಳಿಲ್ಲ ಹುಲ್ಲು ಮಾತ್ರ
ಪಾಲಿಕೆ ವತಿಯಿಂದ ನಗರದ ರಸ್ತೆ ವಿಭಾಜಕಗಳಲ್ಲಿ ಕರವೀರ, ಬೋಲನ್‌ ವಿಲ್ಲ, ಅರೆಲಿಯಾ  ಗಿಡಗಳನ್ನು ನೆಡಲಾಗಿದೆ. KSRTC ಬಸ್‌ ನಿಲ್ದಾಣದಿಂದ ಕುಂಟಿಕಾನ ಜಂಕ್ಷನ್‌ ಡಿವೈಡರ್‌ನಲ್ಲಿ ಪಾಲಿಕೆ ವತಿ ಯಿಂದ ನೆಡಲಾದ ಗಿಡಗಳ ಪೈಕಿ ಕೆಲವು ಗಿಡಗಳು ಈಗಾಗಲೇ ಸತ್ತು ಹೋಗಿದ್ದು, ಇನ್ನೂ, ಕೆಲವು ಪ್ರದೇಶಗಳಲ್ಲಿ ಹುಲ್ಲು ಮಾತ್ರ ಇದೆ. ಗಿಡಗಳ ನಿರ್ವಹಣೆಗೆಂದು ಪಾಲಿಕೆ ಒಂದು ಗಿಡಕ್ಕೆ 39 ರೂ. ವ್ಯಯಿಸುತ್ತಿದೆ. ಆದರೂ, ಗಿಡಗಳ ನಿರ್ವಹಣೆ ಮಾಡುವಲ್ಲಿ ಆಗುತ್ತಿರುವ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

ರಕ್ಷಣಾ ಬೇಲಿ ಇಲ್ಲ
ನಗರದ ಕೆಪಿಟಿ ಕಾಲೇಜಿನಿಂದ ಯೆಯ್ನಾಡಿ ಮಾರ್ಗದ ಎರಡೂ ಬದಿಗಳಲ್ಲಿ ಪಾಲಿಕೆ ಸಹಯೋಗದಲ್ಲಿ ನೆಟ್ಟಂತಹ ಗಿಡಗಳು ಬೀಳುವ ಹಂತದಲ್ಲಿದೆ. ಈ ಗಿಡಕ್ಕೆ ಪೆಟ್ಟಾಗದಂತೆ ರಕ್ಷಣಾ ಬೇಲಿ ಹಾಕಲಾಗಿತ್ತು. ಆದರೆ ಇವುಗಳಲ್ಲಿ ಅನೇಕ ಬೇಲಿಗಳು ಕಿತ್ತು ಪಕ್ಕದ ಫುಟ್‌ಪಾತ್‌ಗೆ ಬಿದ್ದಿವೆ. ಗಾಳಿ ಬಂದರೆ ಈ ಗಿಡಗಳು ಬಾಗಿ ಕಾಂಡಕ್ಕೆ ಪೆಟ್ಟು ಬಿದ್ದು ಕೆಲ ಗಿಡಗಳು ಈಗಾಗಲೇ ಸಾವನ್ನಪ್ಪಿದೆ.

ಪಾಲಿಕೆ ಖರ್ಚು ಮಾಡಿದ್ದೆಷ್ಟು
ನಗರದ ಅನೇಕ ಕಡೆಗಳಲ್ಲಿ ಮಹಾನಗರ ಪಾಲಿಕೆ  2013-14ರಲ್ಲಿ 13,141 ಗಿಡ ಮತ್ತು 2015-16ರಲ್ಲಿ 1,280 ಗಿಡಗಳನ್ನು ನೆಟ್ಟಿದೆ. ಒಟ್ಟಾರೆ ಮೂರು ವರ್ಷದಲ್ಲಿ 14,421 ಗಿಡಗಳನ್ನು ನೆಟ್ಟಿದೆ. ಗಿಡಗಳನ್ನು ನೆಡಲು ಒಟ್ಟು 3,19,255 ಮತ್ತು ಗಿಡಗಳ ನಿರ್ವಹಣೆಗೆ 5,70,475 ರೂ. ವ್ಯಯಿಸಿದೆ. ಒಟ್ಟಾರೆಯಾಗಿ ಒಂದು ಗಿಡ ನೆಡಲು ಸುಮಾರು 22 ರೂ. ಮತ್ತು ಒಂದು ಗಿಡದ ನಿರ್ವಹಣೆಗೆ 39 ರೂ. ಖರ್ಚು ಮಾಡಿದೆ.

Advertisement

ನೀರಿಲ್ಲದೆ ಸತ್ತು ಹೋದ ಗಿಡ
ನೀರಿನ ಸಮಸ್ಯೆ ಇದ್ದ ಕಾರಣ ಕೆಲವು ಪ್ರದೇಶಗಳಲ್ಲಿ ಈಗಾಗಲೇ ನೆಟ್ಟ ಗಿಡ ಸತ್ತು ಹೋಗಿದೆ. ಮುಂದಿನ ದಿನಗಳಲ್ಲಿ ಸತ್ತ ಗಿಡದ ಬದಲಾಗಿ ಬೇರೆ ಗಿಡ ನೆಡಲಾಗುವುದು. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಂಗಳೂರನ್ನು ಹಸಿರೀಕರಣ ಮಾಡುವತ್ತ ಗಮನಹರಿಸುತ್ತೇವೆ.
– ಭಾಸ್ಕರ್‌ ಕೆ. ಪಾಲಿಕೆ ಮೇಯರ್‌

ಮರ ಸ್ಥಳಾಂತರ ಮಾಡಬಹುದು
ಒಂದು ವೇಳೆ ಯಾವುದೇ ಕಾಮಗಾರಿಗೆ ಮರ ಅಡ್ಡಿಯಾಗುತ್ತದೆ ಎಂದಾದರೆ ಅದನ್ನು ಸ್ಥಳಾಂತರಿಸಲು ಅವಕಾಶವಿದೆ. ಹುಣಸೆ ಮರ, ಆಲದ ಮರ ಸೇರಿದಂತೆ ಹೆಚ್ಚು ಬಾಳ್ವಿಕೆ ಬರುವ ಅನೇಕ ಮರಗಳು ಜಿಲ್ಲೆಯಲ್ಲಿ ಸ್ಥಳಾಂತರ ಮಾಡಿ ಬೇರೆ ಕಡೆ ನೆಡಲಾದ ಅನೇಕ ಉದಾಹರಣೆಗಳಿವೆ. ಇದು ಯಶಸ್ವಿಯಾಗಿದ್ದು, ಚಿಗುರೊಡೆದಿದೆ.

— ನವೀನ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next