ಪುತ್ತೂರು: ಬಿರುಮಲೆ ಗುಡ್ಡದಲ್ಲಿ ಸಾಲು ಮರದ ತಿಮ್ಮಕ್ಕ ಟ್ರೀಪಾರ್ಕ್ ಕಾಮಗಾರಿ ಹೆಚ್ಚು- ಕಡಿಮೆ ಅಂತಿಮಗೊಂಡಿದೆ. ಮುಂದಿನ 5 ವರ್ಷ ವಿವಿಧ ಕಾಮಗಾರಿಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಬಿರುಮಲೆ ಗುಡ್ಡ ಅಭಿವೃದ್ಧಿ ಸಮಿತಿ ಉತ್ಸಾಹದಿಂದಿದ್ದು, ಟ್ರೀಪಾರ್ಕ್‌ನ ನಿರ್ವಹಣೆಯನ್ನು ಇದಕ್ಕೆ ನೀಡುವ ಬಗ್ಗೆ ಆಲೋಚಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವಿ.ಪಿ. ಕಾರ್ಯಪ್ಪ ಅವರು ಹೇಳಿದರು.
ದರ್ಬೆ ಸಮೀಪದ ಗುಲಾಬಿ ಸದನದಲ್ಲಿ ಶನಿವಾರ ಸಂಜೆ ನಡೆದ ಬಿರುಮಲೆ ಗುಡ್ಡ ಅಭಿವೃದ್ಧಿ ಸಮಿತಿಯ ಮಹಾಸಭೆಯಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಬಿರುಮಲೆ ಗುಡ್ಡವನ್ನು ಅಭಿವೃದ್ಧಿ ಮಾಡಬೇಕು ಎಂದು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಟ್ರೀಪಾರ್ಕ್ ಕಾಮಗಾರಿ ಯಶಸ್ವಿಯಾಗಿ ನಡೆಯುತ್ತಿದೆ. ರಮಾನಾಥ ರೈ ಸಚಿವರಾಗಿದ್ದಾಗ, ಅವರ ಆಶಯದಂತೆ ಟ್ರೀಪಾರ್ಕ್ ನಿರ್ಮಿಸಲಾಗಿದೆ. ರಾಜ್ಯ ಸರಕಾರದಿಂದ ಅನುದಾನ ಮಂಜೂರುಗೊಂಡಿದ್ದು, 41 ಲಕ್ಷ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ 5 ವರ್ಷಗಳಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಮುಂದಿನ ಕಾಮಗಾರಿಗಾಗಿ 35 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಅನುದಾನ ಬಿಡುಗಡೆಗೊಳ್ಳುವ ಸಂಭವ ಇದೆ. ಇದರಲ್ಲಿ ಮಕ್ಕಳ ಪಾರ್ಕ್, ನೀರಿನ ಟ್ಯಾಂಕ್, ಗಲ್ಲಿ ಚೆಕ್ಸ್ (ಗುಡ್ಡದ ಮೇಲಿನಿಂದ ಹರಿದು ಬರುವ ಮಳೆನೀರಿನ ವೇಗವನ್ನು ಇಳಿಜಾರಿನಲ್ಲಿ ಕಡಿಮೆ ಮಾಡುವ ಕಾಮಗಾರಿ), ಕಾರಂಜಿ ನಿರ್ಮಾಣ ಮಾಡಲಾಗುವುದು. ಇಷ್ಟು ಕಾಮಗಾರಿ ಮುಗಿದ ಬಳಿಕ, ಇನ್ನೊಂದು ಹಂತದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಮುಂದಿಡಲಾಗುವುದು. ಒಟ್ಟು ಐದು ವರ್ಷದಲ್ಲಿ ಇಂತಹ ಹಲವು ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಎ.ವಿ. ನಾರಾಯಣ್ ಮಾತನಾಡಿ, 1978ರಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಕೋಚಣ್ಣ ರೈಗಳ ಮುತುವರ್ಜಿಯಲ್ಲಿ ಬಿರುಮಲೆ ಗುಡ್ಡದಲ್ಲಿ ಅನೇಕ ಕೆಲಸಗಳನ್ನು ಮಾಡಲಾಗಿದೆ. ಇದೀಗ 15 ಎಕರೆ ಪ್ರದೇಶದಲ್ಲಿ ಟ್ರೀಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಮುಂದೆಯೂ ವಿವಿಧ ಯೋಜನೆಗಳನ್ನು ಇಲ್ಲಿ ಹಮ್ಮಿಕೊಳ್ಳಬೇಕಾಗಿದೆ ಎಂದರು. ಸಮಿತಿಯಲ್ಲಿ ಸಕ್ರಿಯರಾಗಿದ್ದ ಪ್ರೊ| ಬಿ.ಜೆ. ಸುವರ್ಣ ಅವರು ಇತ್ತೀಚೆಗೆ ನಿಧನ ಹೊಂದಿದ್ದು, ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಉಪಾಧ್ಯಕ್ಷ ಎಂ. ದತ್ತಾತ್ರೇಯ, ಕಾರ್ಯದರ್ಶಿ ಎ. ಜಗಜೀವನ್‌ದಾಸ್ ರೈ, ಜಯಪ್ರಕಾಶ್ ರೈ, ಟಿ. ಕರುಣಾಕರ ಪೈ, ಶಿವಾನಂದ ಶೇಟ್, ನಿತಿನ್ ಪಕ್ಕಳ, ರವಿಪ್ರಕಾಶ್, ಗೋಪಾಲಕೃಷ್ಣ, ಡಾ| ಕೆ. ರವೀಂದ್ರ, ದೀಕ್ಷಾ ಪೈ, ಸುಭಾಶ್ ರೈ, ಎ. ಶರತ್ ಕುಮಾರ್, ಡಾ| ಸತ್ಯವತಿ ಆಳ್ವ, ಮನೋಜ್ ಎನ್. ಶಾಸ್ತ್ರೀ, ವನಿತಾ, ಡಾ| ಎನ್. ಯದುಕುಮಾರ್ ಉಪಸ್ಥಿತರಿದ್ದರು. ಖಜಾಂಚಿ ಎಂ.ಎಸ್. ಅಮ್ಮಣ್ಣಾಯ ವಂದಿಸಿದರು.