Advertisement

ಅಪಾಯಕಾರಿ ಸ್ಥಿತಿಯಲ್ಲಿ ಮರ: ತೆರವಿಗೆ ಆಗ್ರಹ

12:29 AM Jan 21, 2020 | Sriram |

ಹೆಬ್ರಿ: ಮಡಾಮಕ್ಕಿ ಗ್ರಾಮ ಪಂಚಾಯತ್‌ನ ಬಸ್‌ಸ್ಟಾಂಡ್‌ ಬಳಿ ಇರುವ ದೊಡ್ಡ ಬೋಗಿ ಮರವು ಅಪಾಯಕಾರಿ ಸ್ಥಿತಿಯಲ್ಲಿದೆ. ಇತ್ತೀಚೆಗೆ ಮರದ ಒಂದು ದೊಡ್ಡ ಗಾತ್ರದ ರೆಂಬೆ ಮುರಿದು ಬಿದ್ದಿದ್ದು, ಸಮೀಪದಲ್ಲಿದ್ದ ವಿಶಾಲಾಕ್ಷಿ ಎಸ್‌. ಹೆಗ್ಡೆ ಎನ್ನುವವರ ಒಡೆತನದ ಕಟ್ಟಡಕ್ಕೆ ಹಾನಿಯಾಗಿದೆ.

Advertisement

ಮರವು ಮೂರು ಕವಲುಗಳಾಗಿ ಹರಡಿದ್ದು, ಸದ್ಯ ಒಂದು ಭಾಗ ಮಾತ್ರ ಮುರಿದು ಬಿದ್ದಿದೆ. ಇನ್ನೊಂದು ಕವಲು ಮುರಿದು ಬಿದ್ದಲ್ಲಿ ಬಸ್‌ಸ್ಟಾಂಡ್‌ಗೆ ಹಾನಿ ಯಾಗುವ ಸಂಭವವಿದೆ. ಅದಲ್ಲದೆ ಮರದ ಎದುರು ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೂ, ಮನೆಗಳಿಗೂ ಹಾನಿ ಯಾಗಲಿದೆ.

ಈ ಮರವು ಮಡಾಮಕ್ಕಿ ಗ್ರಾಮದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿ 27ರ ಬದಿ ಯಲ್ಲಿದ್ದು, ನಿತ್ಯ ವಾಹನ ಸಂಚಾರ ಇರುತ್ತದೆ. ಪ್ರಸ್ತುತ ಮರವು ಶಿಥಿಲಗೊಂಡಿದ್ದು, ಈ ಹಿಂದೆಯೇ ಅಲ್ಲಿನ ನಿವಾಸಿಗಳು ಈ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಇನ್ನಷ್ಟು ಅವಘಡ ಸಂಭವಿಸುವ ಮೊದಲು ಆದಷ್ಟು ಬೇಗ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹ.

ಅಪಾಯಕಾರಿ
ಈ ಮರ ಪ್ರಸ್ತುತ ಅಪಾಯಕಾರಿಯಾಗಿದೆ. ಒಂದುಕಡೆ ಸಮೀಪದ ಮನೆ ಮತ್ತು ಅಂಗಡಿಗಳಿಗೆ ತೊಂದರೆ. ಜತೆಗೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಇದೆ. ಈ ಬಗ್ಗೆ ಪಿಡಿಒ ಅವರ ಬಳಿ ಮಾತುಕತೆ ನಡೆಸಿದ್ದು, ಕ್ರಮ ಕೈಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.
-ರಂಜನ್‌ ಹೆಗ್ಡೆ, ಮಡಾಮಕ್ಕಿ.

ತೆರವುಗೊಳಿಸಲಿ
ಮರವನ್ನು ತೆರವುಗೊಳಿಸುವ ಕುರಿತು ಈ ರೀತಿಯ ಹಲವು ಅರ್ಜಿಗಳು ಗ್ರಾಮ ಪಂಚಾಯತ್‌ಗೆ ಈ ಹಿಂದೆಯೂ ಬಂದಿದ್ದು, ನಾವು ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೇವೆ. ಅರಣ್ಯ ಇಲಾಖೆ ಆದಷ್ಟು ಬೇಗ ಮರವನ್ನು ತೆರವುಗೊಳಿಸಬೇಕು.
-ದಯಾನಂದ ಪೂಜಾರಿ,
ಗ್ರಾ.ಪಂ. ಸದಸ್ಯರು, ಮಡಾಮಕ್ಕಿ

Advertisement

ಸೂಕ್ತ ಕ್ರಮ
ಮರ ಬಿದ್ದಿರುವ ಮಾಹಿತಿ ದೊರೆತಿದ್ದು, ಆದಷ್ಟು ಬೇಗ ಸ್ಥಳ ಪರಿಶೀಲನೆ ನಡೆಸಿ, ಇನ್ನೊಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ನವೀನ್‌ ಡಿ’ಸೋಜಾ, ಅರಣ್ಯಾಧಿಕಾರಿ

ಮನವಿ
ಮರ ಬಿದ್ದಿರುವ ಪ್ರದೇಶವನ್ನು ನಾನು ಖುದ್ದಾಗಿ ಹೋಗಿ ಪರೀಕ್ಷಿಸಿದ್ದು, ಇನ್ನುಳಿದ ಮರದ ಭಾಗವು ಸದ್ಯದಲ್ಲಿ ಬೀಳುವ ಪರಿಸ್ಥಿತಿಯಲ್ಲಿದೆ. ಮರವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.
-ದಿನೇಶ್‌ ನಾಯ್ಕ,
ಪಿಡಿಒ, ಮಡಾಮಕ್ಕಿ

-ವಿಷ್ಣುಧರನ್‌
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಯ ಶಿಕ್ಷಣಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next