Advertisement

5 ಲಕ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಕೃತ್‌ ಕಸಿ ಚಿಕಿತ್ಸೆ

02:10 PM Nov 09, 2017 | Team Udayavani |

ಬೆಂಗಳೂರು: ಮುಂದಿನ ದಿನಗಳಲ್ಲಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಯಕೃತ್‌ ಕಸಿ (ಲಿವರ್‌ ಟ್ರಾನ್ಸ್‌ಪ್ಲಾಂಟ್‌) ಚಿಕಿತ್ಸೆ ನೀಡಲು ಪ್ರತ್ಯೇಕ ಸಂಸ್ಥೆ ರಚಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಕೇವಲ 5 ಲಕ್ಷ ರೂಗಳಲ್ಲಿ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಬುಧವಾರ ನಗರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಯಕೃತ್‌ ಕಸಿ ಚಿಕಿತ್ಸೆಗೆ 20 ರಿಂದ 25 ಲಕ್ಷ ರೂ. ಪಡೆಯುತ್ತಿವೆ. ಅಷ್ಟು ಮೊತ್ತ ವ್ಯಯಿಸಿ ಚಿಕಿತ್ಸೆ ಪಡೆಯಲು ಬಡವರಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಯಕೃತ್‌ ಕಸಿ ಚಿಕಿತ್ಸೆಗಾಗಿ ಸಂಸ್ಥೆಯೊಂದನ್ನು ರಚಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೇವಲ 5 ಲಕ್ಷದೊಳಗೆ ಬಡವರಿಗೆ ಯಕೃತ್‌ ಕಸಿ ಚಿಕಿತ್ಸೆ ದೊರೆಯಲಿದೆ ಎಂದರು.

ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ಈ ಚಿಕಿತ್ಸೆ ನೀಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅದೇ ರೀತಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮಂಡಿ ಚಿಪ್ಪು ಕಸಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದ 17ನೇ ವೈದ್ಯಕೀಯ ಕಾಲೇಜನ್ನು ಬೌರಿಂಗ್‌ ಆಸ್ಪತ್ರೆಯ ಆವರಣದಲ್ಲಿ 200 ಕೋಟಿ ರೂ.ನಲ್ಲಿ ನಿರ್ಮಿಸಲಾಗುತ್ತಿದೆ. ಜತೆಗೆ ರಾಜ್ಯದ ಇನ್ನೂ 6 ಕಡೆಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಪ್ರಾರ್ಥಿಸಿ ಎಂದು ಹೇಳಿ ಬಿಲ್‌ ವಸೂಲಿ: ಸಚಿವ ರೋಷನ್‌ ಬೇಗ್‌ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿ ಸಾವನ್ನಪ್ಪಿದ ನಂತರವೂ ವೆಂಟಿಲೇಟರ್‌ನಲ್ಲಿಟ್ಟು ದೇವರಲ್ಲಿ ಪ್ರಾರ್ಥಿಸಿ ಎಂದು ಹೇಳಿ ಬಿಲ್‌ ವಸೂಲಿ ಮಾಡುತ್ತಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವರು ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ತರಲು ಮುಂದಾಗಿದ್ದು, ಸರ್ಕಾರದೊಂದಿಗೆ ನಾವಿದ್ದೇವೆ. ಜನರಿಗೆ ಅನುಕೂಲಕರವಾದ ಯೋಜನೆ ಜಾರಿಗೆ ತರುವುದು ನಮ್ಮ ಸರ್ಕಾರದ ಗುರಿಯಾಗಿದ್ದು, ಔಷಧ ಉತ್ಪಾದನಾ ಕಂಪನಿಗಳ ಮಾಫಿಯಾ ಅಂತ್ಯವಾಗಬೇಕಿದೆ ಎಂದು ತಿಳಿಸಿದರು.

Advertisement

ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌, ಎಚ್‌. ಎಂ.ರೇವಣ್ಣ, ಕೆ.ಜೆ.ಜಾರ್ಜ್‌, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್‌, ಮೇಯರ್‌ ಆರ್‌.ಸಂಪತ್‌ರಾಜ್‌ ಇತರರು ಇದ್ದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು ಹಿಂಜರಿಯುತ್ತಾರೆ. ಹೀಗಾಗಿ ಗ್ರಾಮೀಣ ಸೇವೆ ಕಡ್ಡಾಯ ಗೊಳಿಸಲಾಗಿತ್ತು. ಕೆಲವರು ತಡೆಯಾಜ್ಞೆ ತಂದಿದ್ದರು. ಕೆಲಸ ಬೇಡ ಎಂದರೆ ಹೇಗೆ?
 ●ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯದಲ್ಲಿ 40 ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆ ಇರಲಿಲ್ಲ. 30 ವರ್ಷಗಳಿಂದೀಚೆಗೆ ಖಾಸಗಿಯವರು ಬಂದಿದ್ದು, ನಮ್ಮದೇನೂ ಆಕ್ಷೇಪವಿಲ್ಲ. ನಮ್ಮಲ್ಲಿ ಬರುವವರನ್ನು ಮಾನವೀಯತೆಯಿಂದ ನೋಡಬೇಕು.
 ●ಕೆ.ಆರ್‌.ರಮೇಶ್‌ ಕುಮಾರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next