Advertisement

ಕ್ಯಾನ್ಸರ್‌ಗೆ ಕಲಬುರಗಿಯಲ್ಲೇ ಚಿಕಿತ್ಸೆ

10:00 AM Jan 05, 2018 | |

ಕಲಬುರಗಿ: ಬಂದಾಗಿದ್ದ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿನ ವಿಠ್ಠಲರಾವ ಸುತ್ರಾವೆ ಸ್ಮಾರಕದ ಫೆರಿಫೆರಲ್‌ ಕ್ಯಾನ್ಸರ್‌ ಕೇಂದ್ರವು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಕೇಂದ್ರದಡಿ ಈಗ ಸಂಪೂರ್ಣ ಸಿದ್ಧಗೊಂಡಿದ್ದು, ಕ್ಯಾನ್ಸರ್‌ನ ವಿವಿಧ ಹಂತದ ಉತ್ಕೃಷ್ಟ ವೈದ್ಯಕೀಯ ಸೇವೆಗೆ ಬಾಗಿಲು ತೆರೆದಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

Advertisement

ಆಸ್ಪತ್ರೆಯಲ್ಲಿ ಆದಮ್ಯ ಚೇತನದ ಉಚಿತ ಬಿಸಿಯೂಟ ಕಾರ್ಯಕ್ಕೆ ಚಾಲನೆ ನೀಡಿ ಹಾಗೂ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೇವೆ ವೀಕ್ಷಿಸಿದ ಬಳಿಕ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಕಿದ್ವಾಯಿಯಂತೆ ಕಲಬುರಗಿಯಲ್ಲಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿಯೂ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ವೈದ್ಯಕೀಯ ಸೇವಾ ಕಾರ್ಯ ಮತ್ತಷ್ಟು ದ್ವಿಗುಣಗೊಳ್ಳಲಿದೆ. ಹೀಗಾಗಿ ಹೈ.ಕ ಭಾಗದ ಜನರು ಲಾಭ ಸದುಪಯೋಗ ಪಡೆದುಕೊಳ್ಳಬೇಕು. ಬಿಪಿಎಲ್‌ ಕಾರ್ಡ್‌ ದಾರರು ಹಾಗೂ ಎಸ್ಸಿ, ಎಸ್ಟಿ ಜನಾಂಗದವರು ಸಂಪೂರ್ಣ ಉಚಿತ ಆರೋಗ್ಯ ಸೇವಾ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಉನ್ನತೀಕರಣಗೊಂಡ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯವಲ್ಲದೇ ರೋಗಿಗಳಿಗೆ ಲೀನಿಯರ್‌ ಎಕ್ಸ್‌ಲರೇಟರ್‌ ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕಿಮೋಥೆರಫಿ ನೀಡಲಾಗುತ್ತಿದೆ. ಅಲ್ಲದೇ ಪ್ರಮುಖವಾಗಿ ಬ್ರಾಜಿಥೆರಪಿ ಚಿಕಿತ್ಸೆಗಾಗಿ ಬೇಕಾಗುವ ಉಪಕರಣಗಳಿಗಾಗಿ 5 ಕೋಟಿ ರೂ. ವೆಚ್ಚದ ಟೆಂಡರ್‌ ಕರೆಯಲಾಗಿದೆ. ನಿತ್ಯ 50ರಿಂದ 60 ಹೊರ ರೋಗಿಗಳೆಂದು ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ ಒಂದು ಸಾವಿರ ರೋಗಿಗಳ ನೋಂದಣಿಯಾಗಿದೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಮುಂದಿನ ವರ್ಷದೊಳಗೆ ಎರಡು ಸಾವಿರ ಜನರಿಗೆ ವೈದ್ಯಕೀಯ ಸೇವೆ ಸಿಗಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಜಯದೇವ ಹೃದ್ರೋಗದ ಆಸ್ಪತ್ರೆಯಂತೆ ಕಿದ್ವಾಯಿ ಸಹ ಉತ್ಕೃಷ್ಟ
ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಲಿದೆ ಎಂದರು.

ಇನ್ಪೋಸಿಸ್‌ ಅವರ ನೆರವಿನಿಂದ ಧರ್ಮಶಾಲಾ ಕಟ್ಟಡ ಅಂತಿಮ ಘಟ್ಟದಲ್ಲಿದ್ದು, ಇನ್ನು ಕೆಲವು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಪರ ಊರಿನಿಂದ ಬರುವ ರೋಗಿಗಳಿಗೆ ತಂಗಲು ಅನುಕೂಲವಾಗಲಿದೆ. ರೋಗಿಗಳಿಗೆ
ಇನ್ಮುಂದೆ ಮಧ್ಯಾಹ್ನ ಊಟ ಸಹ ಉಚಿತವಾಗಿ ದೊರಕಲಿದೆ. ಆಸ್ಪತ್ರೆಯಲ್ಲೂ ನುರಿತ ವೈದ್ಯರ ತಂಡವಿದ್ದು, ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಆಸ್ಪತ್ರೆಯಲ್ಲಿ ಅವಶ್ಯಕ 180 ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ. ಅಲ್ಲದೇ ಅನುದಾನದ ಸಲುವಾಗಿ ಹಣಕಾಸು ಇಲಾಖೆ ಮುಂದೆ ಪ್ರಸ್ತಾವನೆ ಇದೆ ಎಂದು ಸಚಿವರು ತಿಳಿಸಿದರು.

ಕಿದ್ವಾಯ ಆಸ್ಪತ್ರೆ ನಿರ್ದೇಶಕ ಡಾ| ಕೆ. ಲಿಂಗೇಗೌಡ ಮಾತನಾಡಿ, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಸತತ ಪ್ರಯತ್ನದ ಮೇರೆಗೆ ಸೂಕ್ತ ಅನುದಾನ ಹಾಗೂ ಬಹುಕೋಟಿ ಮೌಲ್ಯದ ಉಪಕರಣಗಳನ್ನು ತಂದಿದ್ದ ಮೇರೆಗೆ ಬೆಂಗಳೂರಿನಲ್ಲಿರುವ ಕಿದ್ವಾಯಿ ಆಸ್ಪತ್ರೆಯಂತೆ ಸನ್ನದ್ಧಗೊಂಡಿದೆ. ಆಸ್ಪತ್ರೆಯಲ್ಲಿನ ಇನ್ನಿತರ ಸುಧಾರಣಾ ಕಾರ್ಯಗಳಿಗೆ ದಾನಿಗಳು ಮುಂದೆ ಬಂದು ಸಹಾಯ ಮಾಡಿದಲ್ಲಿ ಆಸ್ಪತ್ರೆ ಸುಧಾರಣಾ ಕಾರ್ಯಕ್ಕೆ ಮತ್ತಷ್ಟು ಕೈ ಜೋಡಿಸಿದಂತಾಗುತ್ತದೆ. ಎಲ್ಲವೂ ಸರ್ಕಾರದಿಂದಲೇ ನಿರೀಕ್ಷಿಸುವುದು ಸಮಂಜಸ ಎನಿಸುವುದಿಲ್ಲ ಎಂದು ಹೇಳಿದರು.

Advertisement

ಜಾಗೃತಿ ಕಾರ್ಯಕ್ರಮಕ್ಕೆ ಸೂಚನೆ: ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಎಲ್ಲ ಹಂತದ ಚಿಕಿತ್ಸೆಗೆ ಸಿದ್ಧವಾಗಿದೆ. ಕ್ಯಾನ್ಸರ್‌ ರೋಗಿಗಳಲ್ಲಿ ಯಾವುದೇ ಭಯ ಬೇಡ. ಉಚಿತವಾಗಿ ವೈದ್ಯಕೀಯ ಸೇವೆ ಕುರಿತಾಗಿ ಈ ಭಾಗದ ಜನರ ಮನೆ-ಮನೆಗೆ ಮಾಹಿತಿ ತಲುಪಿಸಲು ಆರೋಗ್ಯ ಇಲಾಖೆ ಸಭೆ ನಡೆಸಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಕಾರ್ಯಕ್ರಮ ರೂಪಿಸುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಎಚ್‌ಕೆಆರ್‌ಡಿಬಿಯಿಂದ ಬಸ್‌ವೊಂದನ್ನು ಕಿದ್ವಾಯಿ ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಆದಮ್ಯ ಚೇತನದ ಸುಧಾಕರ ಪಾಟೀಲ, ಸಂಪತ್‌ ತಾಪಡಿಯಾ, ಗುರುರಾಜ ಸುದ್ದಿಗೋಷ್ಠಿಯಲ್ಲಿದ್ದರು.

ಜಯದೇವ ಹೃದ್ರೋಗ ಆಸ್ಪತ್ರೆಯಂತೆ ವೈದ್ಯಕೀಯ ಸೇವೆ ಜನತೆಗೆ ಮುಟ್ಟಿಸಲು ಮಾಧ್ಯಮ ಮಿತ್ರರು ಪಾಸಿಟಿವ್‌ ಕುರಿತಾಗಿ ಬರೆಯಿರಿ. ನೆಗೆಟಿವ್‌ ತಮ್ಮ ಗಮನಕ್ಕೆ ತನ್ನಿ. ಕ್ಯಾನ್ಸರ್‌ ಗುಣಮುಖವಾಗುವ ರೋಗವಾಗಿದೆ.
ಶೀಘ್ರ ಪತ್ತೆ-ಕ್ಯಾನ್ಸರ್‌ ನಾಪತ್ತೆಯಾಗಿದೆ.
  ಡಾ| ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next