Advertisement

ಗಾಯಗೊಂಡ ಸಿಂಗಳೀಕದ ಮರಿಗೆ ಮಾನವೀಯ ಚಿಕಿತ್ಸೆ : ಮರಳಿ ತಾಯಿ ಮಡಿಲಿಗೆ

06:25 PM Jul 16, 2021 | Team Udayavani |

ಕೋಟ: ಮರದಿಂದ ಮರಕ್ಕೆ ಹಾರುವ ಸಂದರ್ಭ ಸಿಂಗಳೀಕದ ಮರಿಯೊಂದು ತಾಯಿಯ ಕೈ ಜಾರಿ ರಸ್ತೆಗೆ ಬಿದ್ದು ತೀವೃವಾಗಿ ಗಾಯಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಉದ್ಯಮಿಯೋರ್ವರು ಇದನ್ನು ಗಮನಿಸಿ ಪಶು ವೈದ್ಯರ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಮರಳಿ ತಾಯಿಯ ಮಡಿಲು ಸೇರಿಸಿದ ಮಾನವೀಯ ಘಟನೆ ಸಾಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ನಿನ್ನೆ ನಡೆದಿದೆ.

Advertisement

ತೆಕ್ಕಟ್ಟೆ ಸಮೀಪ ಮಲ್ಯಾಡಿ ನಿವಾಸಿ, ಉದ್ಯಮಿ ನಿಖಿಲ್ ಅವರು ಸಾಬ್ರಕಟ್ಟೆಯಿಂದ ಶಿರಿಯಾರ ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಾರಿನ ಎದುರಿಗೆ ಸಿಂಗಳೀಕವೊಂದು ಮರದಿಂದ-ಮರಕ್ಕೆ ಹಾರುವಾಗ ಸುಮಾರು 1ತಿಂಗಳ ಮರಿಯೊಂದನ್ನು ಕೈ ಜಾರಿ ಕೆಳಬೀಳಿಸಿತ್ತು ಹಾಗೂ ಇದರಿಂದ ಮರಿ ತೀವ್ರ ಗಾಯಗೊಂಡಿತ್ತು. ನಿಖಿಲ್ ಅವರು ತತ್‌ಕ್ಷಣ ಕಾರುನಿಲ್ಲಿಸಿ ಮರಿಯನ್ನು ರಸ್ತೆಯಿಂದ ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಳೀಯ ಪಶುವೈದ್ಯಾಧಿಕಾರಿ ಡಾ| ಪ್ರದೀಪ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ ಹಾಗೂ ಪಡುಮುಂಡು ಭಾಗದಲ್ಲಿ ಕಾರ್ಯನಿರತರಾಗಿದ್ದ ಪಶು ವೈದ್ಯರನ್ನು ಭೇಟಿಯಾಗಿ, ಗ್ಲೋಕೋಸ್, ಇಂಜೆಕ್ಷನ್ ಮುಂತಾದ ಸೂಕ್ತ ಚಿಕಿತ್ಸೆಗಳನ್ನು ನೀಡಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಮರಿ ಚೇತರಿಸಿಕೊಂಡು ಲವ-ಲವಿಕೆಗೊಂಡಿತ್ತು. ಅನಂತರ ಅದನ್ನು ಪುನಃ ತಾಯಿ ಇರುವ ಸ್ಥಳಕ್ಕೆ ಕೊಂಡೊಯ್ದು ಬಿಡಲಾಯಿತು.

ಮರಿಯನ್ನು ಕಾರಿನಲ್ಲಿ ಕರೆದೊಯ್ಯುವ ಸಂದರ್ಭ ಹಾಗೂ ಚಿಕಿತ್ಸೆ ನೀಡುವ ಸಂದರ್ಭ ಸ್ವಲ್ಪವೂ ಭಯಗೊಳ್ಳದೆ ಆತ್ಮೀಯವಾಗಿ ಬೆರೆತಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next