Advertisement

ಹಿರಿಯರನ್ನು ಗೌರವ, ಆದರದಿಂದ ನಡೆಸಿಕೊಳ್ಳಿ; ಎಂ.ಶ್ರೀಧರ

06:25 PM Jun 23, 2022 | Team Udayavani |

ಚಾಮರಾಜನಗರ: ಹಿರಿಯ ನಾಗರಿಕರನ್ನು ವೃದ್ದಾಶ್ರಮಗಳಿಗೆ ದೂಡದೆ ಗೌರವ, ಆದರದಿಂದ ನಡೆಸಿಕೊಳ್ಳುವಂತೆ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ, ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ, ಗ್ರೀನ್‌ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ
ನಾಗರಿಕರ ನಿಂದನೆ ತಡೆ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರನ್ನು ಮಕ್ಕಳಂತೆ ಪಾಲನೆ ಮಾಡಿ: ಸರ್ಕಾರ ಹಿರಿಯ ನಾಗರಿಕರ ಸಂರಕ್ಷಣೆಗಾಗಿ 2007ರಲ್ಲಿ ಕಾಯ್ದೆ ಜಾರಿಗೊಳಿಸಿದ್ದರು ಸಹ ಹಿರಿಯರಲ್ಲಿ ಕಾಯ್ದೆಯ ಅರಿವು ಇರುವುದಿಲ್ಲ. ಹಿರಿಯ ನಾಗರಿಕರಿಗೆ ಶಾಂತಿ, ನೆಮ್ಮದಿ, ಪ್ರೀತಿ, ಗೌರವ ನೀಡಿ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಿಂಸೆ, ದೌರ್ಜನ್ಯ, ಅತಿಕ್ರಮಣ ಮಾಡದೇ ಹಿರಿಯರಿಗೆ ವೃದ್ದಾಪ್ಯದಲ್ಲಿ ಕಾಳಜಿವಹಿಸಬೇಕು. ಅವರನ್ನು ಜಾಗೃತಗೊಳಿಸಬೇಕಾದ ಅಗತ್ಯವಿದೆ. ಹಿರಿಯರು ತಮ್ಮ ಬದುಕಿನ ಅಮೂಲ್ಯ ಸಮಯ, ಹಣವನ್ನು ವ್ಯರ್ಥ ಮಾಡದೇ ಮಕ್ಕಳ ಪಾಲನೆ ಪೋಷಣೆಗೆ ಮೀಸಲಿಟ್ಟಿರುತ್ತಾರೆ. ವೃದ್ಧಾಪ್ಯದಲ್ಲಿ ಹಿರಿಯರನ್ನು ಮಕ್ಕಳಂತೆ ಪಾಲನೆ ಪೋಷಣೆ
ಮಾಡುವುದು ಪ್ರಜ್ಞಾವಂತರಾದ ಎಲ್ಲರ ಹೊಣೆಯಾಗಿದೆ ಎಂದರು.

ವೃದ್ಧಾಶ್ರಮಗಳು ಹೆಚ್ಚಳ: ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲವೂ ವ್ಯವಹಾರಿಕವಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿದ್ಯಾವಂತರು ಹಿರಿಯ ನಾಗರಿಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ದುರಂತದ ಸಂಗತಿ. ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸಲಾಗುತ್ತಿದೆ. ಇದರಿಂದಾಗಿಯೇ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಮೌಲ್ಯಗಳು ನೈತಿಕತೆಯನ್ನು ಕಳೆದುಕೊಳ್ಳುತ್ತಿದೆ.

ಕುಟುಂಬಕ್ಕಾಗಿ ಇಡೀ ತಮ್ಮ ಜೀವನವನ್ನೇ ಶ್ರಮಿಸಿದ ಹಿರಿಯರಿಗೆ ಆದ್ಯತೆ ನೀಡಬೇಕು. ಹಿರಿಯ ನಾಗರಿಕ ರಿಗೂ ಸಹ ಮೂಲಭೂತ ಹಕ್ಕುಗಳಿವೆ. ಹಿರಿಯರಿಗೆ ದೊರೆಯುವ ಸೌಲಭ್ಯ, ಸವಲತ್ತುಗಳನ್ನು ಅಧಿಕಾರಿ ಗಳು, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

Advertisement

ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯ, ಹಕ್ಕುಗಳು ಹಾಗೂ ಪರಿಹಾರದ ಬಗ್ಗೆ ಜಾಗೃತಿ ಹೊಂದಬೇಕು. ಹಿರಿಯ ನಾಗರಿಕರಿಗಾಗಿ ಪ್ರಾರಂಭವಾಗಿರುವ ಸಹಾಯವಾಣಿ 14567 ಸೌಲಭ್ಯವನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ಪ್ರಾಧಿಕಾರವು ಹಿರಿಯ ನಾಗರಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಎಂ. ಶ್ರೀಧರ ತಿಳಿಸಿದರು.

ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸುರೇಶ್‌ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ದಾಸ್‌ ಅವರು ಹಿರಿಯ ನಾಗರಿಕರಿಗೆ ಜಾಗೃತಿ ಮೂಡಿಸುವ ಕುರಿತು ಮತ್ತು ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಪಾರ್ವತಿ, ಗ್ರೀನ್‌ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಮಹದೇವಸ್ವಾಮಿ, ನಿರ್ದೇಶಕ ಎಂ.ಪಿ. ಪ್ರಭು, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕಿ ಲತಾ, ಎನ್‌.ವೈ.ಕೆ. ಅಧಿಕಾರಿ ಗುರುರಾಜ್‌ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ಹಿರಿಯ ನಾಗರಿಕರ ನಿಂದನೆ ತಡೆ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಚಾಲನೆ ನೀಡಿದರು.

ಪೋಷಕರನ್ನು ಕಡೆಗಣಿಸಬೇಡಿ: ನಾಗೇಶ್‌
ನಿವೃತ್ತ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ನಾಗೇಶ್‌ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಸಾಕಿ ಸಲಹಿ ಸಮಾಜದಲ್ಲಿ ಅವರಿಗೆ ಉತ್ತಮ ಭವಿಷ್ಯ ಕಲ್ಪಿಸುವ ಹಿರಿಯರ ಶ್ರಮ ಶ್ಲಾಘನೀಯ. ಬೆಳೆದ ಮಕ್ಕಳು ದುಡಿಯುವ ವಯಸ್ಸಿಗೆ ಬಂದ ಕೂಡಲೇ ತಂದೆ ತಾಯಿಯನ್ನು ಕಡೆಗಣಿಸುತ್ತಿರುವುದು ವಿಪರ್ಯಾಸವಾಗಿದೆ. ಸರ್ಕಾರಗಳು ಕೂಡ ಹಿರಿಯ ನಾಗರಿಕರ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ತಲುಪುವಂತೆ ಕ್ರಮ ವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರನ್ನು ಗೌರವ ಆದರದಿಂದ ನಡೆಸಿಕೊಂಡು ಅನುಕಂಪ, ಮಾನವೀಯತೆಯಿಂದ ಸೇವೆ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next