Advertisement

ನೆಪ ಹೇಳದೆ ರೋಗಿಗಳಿಗೆ ಚಿಕಿತ್ಸೆ ನೀಡಿ

11:38 AM Jun 25, 2017 | Team Udayavani |

ಮೈಸೂರು: ಜಿಲ್ಲೆಯಲ್ಲಿ ಮಾರಕ ಡೆಂಘೀ ಜ್ವರ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ನೆಪ ಹೇಳದೆ ಚಿಕಿತ್ಸೆ ನೀಡುವಂತೆ ಸೂಚಿಸಿದರು.

Advertisement

ನಗರದ ತೊಣಚಿಕೊಪ್ಪಲು ಬಡಾವಣೆಯ ತಮ್ಮ ನಿವಾಸದಲ್ಲಿ ಶನಿವಾರ ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜು, ಮೈಸೂರು ವೈದ್ಯಕೀಯ ಕಾಲೇಜು ಡೀನ್‌ ಡಾ.ಕೃಷ್ಣಮೂರ್ತಿ, ಕೆ.ಆರ್‌.ಆಸ್ಪತ್ರೆ ಅಧೀಕ್ಷಕ ಡಾ.ಚಂದ್ರಶೇಖರ್‌ ಅವರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗಗಳ ಹರಡುವಿಕೆ, ಅದರಿಂದ ರೋಗಬಾಧೆಗೆ ಒಳಗಾಗಿರುವವರು, ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಸಿದ್ದರಾಮಯ್ಯ, ಡೆಂಘೀ ಜ್ವರದ ಬಾಧೆಯಿಂದ ಬಳಲುತ್ತಾ ಆಸ್ಪತ್ರೆಗೆ ಬರುವವರ ಬಗ್ಗೆ ವೈದ್ಯರು ಮತ್ತು ಆಸ್ಪತ್ರೆಗಳ ಸಿಬ್ಬಂದಿ ಮುತುವರ್ಜಿ ವಹಿಸಬೇಕು. ರಕ್ತದ ಕೊರತೆ ಇದೆ, ಪ್ಲೇಟ್ಲೆಟ್‌ಗಳ ಕೊರತೆ ಇದೆ ಎಂಬ ನೆಪ ಹೇಳದೆ ಜ್ವರಬಾಧೆಯಿಂದ ಬರುವ ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ತಾಕೀತು ಮಾಡಿದರು.

ವೈದ್ಯರ ಉದಾಸೀನತೆಯಿಂದ ಯಾವುದೇ ರೋಗಿ ಸಾವನ್ನಪ್ಪದಂತೆ ಎಚ್ಚರವಹಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. ಜೊತೆಗೆ ಸಾಂಕ್ರಮಿಕ ರೋಗ ಹರಡದಂತೆ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳು ಸ್ವತ್ಛತೆ ಕಾಪಾಡುವ ಜತೆಗೆ ರೋಗ ಹರಡುವ ಸೊಳ್ಳೆಗಳ ನಿರ್ಮೂಲನೆ ಬಗ್ಗೆ ಮುತುವರ್ಜಿವಹಿಸಬೇಕು ಎಂದು ಜಿಪಂ ಸಿಇಒ ಶಿವಶಂಕರ್‌ ಅವರಿಗೆ ಸೂಚಿಸಿದರು.

170 ಮಂದಿಗೆ ಡೆಂಘೀ: ಜಿಲ್ಲೆಯಲ್ಲಿನ ಮಾಹಿತಿ ನೀಡಿದ ಡಿಎಚ್‌ಒ ಡಾ.ಬಸವರಾಜು ಅವರು, ಜನವರಿಯಿಂದ ಶುಕ್ರವಾರದವರೆಗೆ (ಜೂ.23) 1061 ಜನರು ಶಂಕಿತ ಡೆಂಘೀ ಜ್ವರ ಬಾಧೆಗೆ ಚಿಕಿತ್ಸೆ ಪಡೆದಿದ್ದು, ಈ ಪೈಕಿ 170 ಜನರಿಗೆ ಡೆಂಘೀ ಇರುವುದು ದೃಢ‌ಪಟ್ಟಿದ್ದು,ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

ಪ್ರತಿ ತಾಲೂಕಲ್ಲೂ ಕ್ಷಿಪ್ರ ಕಾರ್ಯ ತಂಡ:
ಸಾಂಕ್ರಮಿಕ ರೋಗ ಅದರಲ್ಲೂ ಮಾರಣಾಂತಿಕವಾದ ಡೆಂಘೀ ಜ್ವರ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೂ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಮೈಸೂರು ನಗರದಲ್ಲಿ 2 ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಲಾ ಒಂದು ಕ್ಷಿಪ್ರ ಕಾರ್ಯ ತಂಡವನ್ನು ರಚಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next