ಬೆಳಗಾವಿ: ಕ್ಯಾನ್ಸರ್ ರೋಗವನ್ನು ಪ್ರಥಮ ಹಂತದಲ್ಲಿರುವಾಗಲೇ ಪತ್ತೆ ಹಚ್ಚಿ, ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಲು ಸಾಧ್ಯವಿದೆ. ಮುಖ್ಯವಾಗಿ ಎಲ್ಲ ಮಕ್ಕಳಿಗೂ ಚಿಕಿತ್ಸೆ ಲಭಿಸಲು ಅನುಕೂಲವಾಗುವುದಕ್ಕೆ ಪ್ರಥಮ ಹೆಜ್ಜೆಯಾಗಿ ಜಾಗೃತಿ ಮೂಡಿಸಬೇಕಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ| ಎಂ.ವಿ. ಜಾಲಿ ಹೇಳಿದರು.
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮಂಗಳವಾರ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ್ ವಿಭಾಗವು ಏರ್ಪಡಿಸಿದ್ದ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಪಾಲಕ ಮತ್ತು ಮಕ್ಕಳಿಗೆ ರೋಗದ ಬಗ್ಗೆ ಅರಿವು ಮೂಡಿಸಬೇಕು. ವಿದೇಶಗಳಲ್ಲಿ ಶೇ. 80ರಷ್ಟು ಮಕ್ಕಳು ಗುಣಮುಖರಾಗುತ್ತಿದ್ದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವೂ ಸೇರಿದಂತೆ ಶೇ. 50ಕ್ಕಿಂತ ಕಡಿಮೆ ಮಕ್ಕಳು ಗುಣಮುಖರಾಗುತ್ತಿದ್ದಾರೆ ಎಂದರು.
ವಿಶ್ವದಾದ್ಯಂತ ಪ್ರತಿವರ್ಷ ಸುಮಾರು 3 ಲಕ್ಷ ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪೈಕಿ ಭಾರತ ದೇಶದಲ್ಲಿಯೇ 85 ಸಾವಿರ ಮಕ್ಕಳು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕಳೆದ 10 ವರ್ಷಗಳಲ್ಲಿ ಇದು ದ್ವಿಗುಣಗೊಂಡಿದ್ದು ಅತ್ಯಂತ ಕಳವಳಕಾರಿ ಸಂಗತಿ ಎಂದರು.
ರೋಗ ಪತ್ತೆ ಮಾಡುವಲ್ಲಿ ವಿಳಂಬ, ಕೈಗೆಟುಕದ ಚಿಕಿತ್ಸಾ ಕೇಂದ್ರಗಳು, ಅರ್ಧದಲ್ಲಿಯೇ ಚಿಕಿತ್ಸೆಯನ್ನು ನಿಲ್ಲಿಸುವುದರಿಂದ ಪ್ರಾಣಾಪಾಯದಂತ ಸಮಸ್ಯೆಗಳು ಬಂದೆರಗುತ್ತವೆ. ಈ ಹಿಂದೆ ಕುಷ್ಟರೋಗ ಅತ್ಯಂತ ಮಾರಕವಾಗಿತ್ತು. ಈಗ ಅದು ನಿರ್ಮೂಲನೆ ಹಂತ ತಲುಪಿದೆ. ಮುಂದಿನ ದಿನಗಳಲ್ಲಿ ನಮ್ಮದೇ ಆದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯುಳ್ಳ ಕ್ಯಾನ್ಸರ್ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. ಇದರಿಂದ ಕ್ಯಾನ್ಸರ್ ಗೆ ಅವಶ್ಯವಿರುವ ಅನೇಕ ವಿಧವಾದ ಚಿಕಿತ್ಸೆಗಳು ಒಂದೆ ಸೂರಿನಲ್ಲಿ ಸಿಗಲಿವೆ ಎಂದು ಹೇಳಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎನ್.ಎಸ್. ವಹಾಂತಶೆಟ್ಟಿ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಮಕ್ಕಳಲ್ಲಿರುವ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನಂತೆ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳಿಲ್ಲದೇ ಮಕ್ಕಳು ಬದುಕುಳಿವ ಸಾಧ್ಯತೆ ಕಡಿಮೆ ಇತ್ತು. ಆದರೆ ಈಗ ಸುಲಭ ಚಿಕಿತ್ಸೆ ಲಭಿಸುತ್ತಿರುವುದರಿಂದ ಗುಣಪಡಿಸಲು ಸಾಧ್ಯವಿದೆ ಎಂದರು.
ಚಿಕ್ಕಮಕ್ಕಳ ಹಿರಿಯ ತಜ್ಞ ವೈದ್ಯರಾದ ಡಾ| ವಿ.ಡಿ. ಪಾಟೀಲ, ಬಾಲ ಕ್ಯಾನ್ಸರ್ ತಜ್ಞ ಡಾ| ಅಭಿಲಾಷಾ ಸಂಪಗಾರ, ಡಾ| ವಿಶ್ವನಾಥ ಪಟ್ಟಣಶೆಟ್ಟಿ, ಡಾ| ಆರಿಫ್ ಮಾಲ್ದಾರ, ಡಾ| ಸುಜಾತಾ ಜಾಲಿ, ಡಾ| ಮನಿಷಾ ಭಾಂಡನಕರ, ಡಾ| ತನ್ಮಯಾ ಮೆಟಗುಡ್, ಡಾ| ರೋಹನ ಭಿಸೆ, ಡಾ| ಭಾವನಾ ಕೊಪ್ಪದ ಮುಂತಾದವರು ಇದ್ದರು. ಡಾ| ಗೋಪಿಕಾ ನಿರೂಪಿಸಿದರು.