Advertisement
ಬಚ್ಚಬೋರನಹಟ್ಟಿ ಮಾರ್ಗವಾಗಿ ಗೋನೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೆಗುದ್ದು, ಮೇಗಳಹಟ್ಟಿ, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ ಹಾಗೂ ಮಿಂಚೇರಿಪುರದವರೆಗೆ ಎತ್ತಿನಬಂಡಿ ಯಾತ್ರೆ ನಡೆಯಲಿದೆ. ಮ್ಯಾಸ ನಾಯಕ ಸಮುದಾಯದ ಸಾಂಸ್ಕೃತಿಕ ವೀರ ಗಾದ್ರಿಪಾಲ ನಾಯಕ ಸ್ವಾಮಿಯ ಹೆಸರಿನಲ್ಲಿ ಸಾಲು ಸಾಲಾಗಿ ಹೊರಟ ಎತ್ತಿನ ಗಾಡಿಗಳು ಕಣ್ಮನ ಸೆಳೆದವು.
ಮಿಂಚೇರಿ ಪಯಣ: ತಾಲೂಕಿನ ಬಚ್ಚಬೋರನಹಟ್ಟಿಯಿಂದ ಮಿಂಚೇರಿ ಜಾತ್ರೆಗೆ ಪಯಣ ಆರಂಭವಾಗುತ್ತದೆ. ಇಲ್ಲಿ ಮ್ಯಾಸ
ನಾಯಕ ಸಮುದಾಯದ ಆರಾಧ್ಯ ದೈವ ಗಾದ್ರಿಪಾಲ ನಾಯಕನ ದೇವಸ್ಥಾನವಿದೆ. ಮಿಂಚೇರಿಗೆ ಹೊರಡುವ ಹಿಂದಿನ ದಿನವೇ ಜಿಲ್ಲೆಯ ವಿವಿಧೆಡೆಗಳಿಂದ ಎತ್ತಿನಗಾಡಿಗಳಲ್ಲಿ ಬರುವ ಭಕ್ತರು ಇಲ್ಲಿ ಬೀಡು ಬಿಡುತ್ತಾರೆ. ಇಲ್ಲಿಂದ ಹೊರಡುವ ಸಮಯದಲ್ಲಿ ಊಟಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯುತ್ತಾರೆ. ಗಾದ್ರಿ ಗುಡ್ಡಕ್ಕೆ (ಮಿಂಚೇರಿ) ಹೊರಟಿರುವ ನೂರಾರು ಮಂದಿ ರಾತ್ರಿ ಮಾರ್ಗ ಮಧ್ಯದ ಕ್ಯಾಸಾಪುರದಲ್ಲಿ ತಂಗುತ್ತಾರೆ.
Related Articles
Advertisement
ಡಿ. 25 ರಂದು ಬೆಳಿಗ್ಗೆ ಸ್ವಾಮಿಯ ಜಂಗಮ ಸ್ವರೂಪಿ ಸದ್ಭಕ್ತರಿಂದ ಭಿಕ್ಷೆ ಸ್ವೀಕಾರ, ನಂತರ ದಾಸೋಹ ನಡೆಯುತ್ತದೆ. ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಮಿಂಚೇರಿ ಕ್ಷೇತ್ರದಿಂದ ನಿರ್ಗಮಿಸುತ್ತಾರೆ. ಅಂದು ಸಂಜೆ ಭೀಮಸಮುದ್ರ ಗ್ರಾಮ ಸಮೀಪದ ಕಡ್ಲೆಗುದ್ದು ಎಂಬ ಹಳ್ಳಿಯ ಬಳಿ ತಂಗುತ್ತಾರೆ. ಡಿ. 26 ರಂದು ಬೆಳಿಗ್ಗೆ ಕ್ಯಾಸಾಪುರದ ಹತ್ತಿರವಿರುವ ಜನಗಿ ಹಳ್ಳದ ದಂಡೆಯಲ್ಲಿ ಗಂಗಾಪೂಜೆ ಮುಗಿಸಿ ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಾರೆ.
ನಗರದಲ್ಲಿ ಎತ್ತಿನಗಾಡಿಗಳ ಮೆರವಣಿಗೆ ನಡೆಸಿ ಇಲ್ಲಿನ ವಿವಿಧ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಡಿ. 27 ರಂದು ಬಚ್ಚಬೋರನಹಟ್ಟಿ ತಲುಪಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನರು ಎತ್ತಿನಬಂಡಿಗಳಲ್ಲಿ ತಮ್ಮ ಸ್ವಸ್ಥಾನಕ್ಕೆ ಮರಳುತ್ತಾರೆ.
300 ಎತ್ತಿನಗಾಡಿಗಳಲ್ಲಿ ಹೊರಟರು ಜನ ಮಿಂಚೇರಿ ಜಾತ್ರೆ ತನ್ನದೇ ಆದ ವೈಶಿಷ್ಟ ಹೊಂದಿದೆ. ಬುಡಕಟ್ಟು ಸಂಸ್ಕೃತಿಯ ಈಆಚರಣೆ ಆಧುನಿಕತೆಯ ಸ್ಪರ್ಶವನ್ನೂ ಪಡೆದುಕೊಂಡಿದೆ. ಈ ಬಾರಿ 300 ಎತ್ತಿನ ಗಾಡಿಗಳು ಜಾತ್ರೆಗೆ ತೆರಳಿದವು. ಬಚ್ಚಬೋರನಹಟ್ಟಿಯಲ್ಲಿ ಶನಿವಾರ ದೇವರ ಮಜ್ಜನ ಬಾವಿಯಲ್ಲಿ ಗುರು ಹಿರಿಯರೊಂದಿಗೆ ಗಂಗಾಪೂಜೆ ನೆರವೇರಿಸಿ ಮಿಂಚೇರಿ ಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.