Advertisement

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

04:59 PM Jan 25, 2022 | Team Udayavani |

ಬೆಂಗಳೂರು: ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಶಿರಾಡಿ ಘಾಟಿಗೆ ಪರ್ಯಾಯ ಮಾರ್ಗಗಳಿವೆ. ಆದರೆ ಆ ಹಾದಿಗಳು ಅತ್ಯಂತ ದುರ್ಗಮವಾಗಿದ್ದು, ಪ್ರಯಾಣಿಕರು ವರ್ಷಗಟ್ಟಲೆ ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿ ಸಬೇಕಾಗುತ್ತದೆ!

Advertisement

– ಇದು ಖಾಸಗಿ ಬಸ್‌ ಮಾಲಕರು ಮತ್ತು ಕೆಲ ಸರಕಾರಿ ಬಸ್‌ ಚಾಲಕರ ಅಳಲು.

ದಶಕದಿಂದ ಶಿರಾಡಿ ಘಾಟಿ ದುರಸ್ತಿ ಕಾರ್ಯ ನಡೆಯುತ್ತಲೇ ಇದೆ. ಅದಕ್ಕಾಗಿ ಸರಕಾರ ಸಾವಿರಾರು ಕೋಟಿ ರೂ. ಸುರಿಯುತ್ತಲೇ ಇದೆ. ಆದರೆ ಫ‌ಲಿತಾಂಶ ಮಾತ್ರ ಶೂನ್ಯ. ಈ ಶಿರಾಡಿ ಘಾಟಿಯದ್ದು ಒಂದು ಕತೆಯಾದರೆ, ಇದಕ್ಕೆ ಪರ್ಯಾಯ ಮಾರ್ಗಗಳದ್ದು ಮತ್ತೂಂದು ರೀತಿಯ ವ್ಯಥೆ. ಮೊದಲ ನಾಲ್ಕೈದು ತಿಂಗಳು ಈ ಮಾರ್ಗದಲ್ಲಿ ಕಷ್ಟಪಟ್ಟು ಬಸ್‌ಗಳ ಕಾರ್ಯಾಚರಣೆ ಮಾಡಬಹುದು. ಅನಂತರ ಮಳೆಗಾಲ ಶುರುವಾದರೆ ಎಲ್ಲಿ ಮಣ್ಣು ಅಥವಾ ಗುಡ್ಡ ಕುಸಿತ ಆಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ವಾಹನಗಳು ಕೆಟ್ಟುನಿಂತರೂ ಸಾಕು, ರಸ್ತೆಗಳೇ ಬಂದ್‌ ಆಗುತ್ತವೆ. ಆಗ ಏನು ಗತಿ ಎಂದು ಖಾಸಗಿ ಬಸ್‌ ಮಾಲಕರು ಮತ್ತು ಚಾಲಕರು ಕೇಳುತ್ತಾರೆ.

ಬೆಂಗಳೂರು-ಮಂಗಳೂರು ನಡುವೆ ಶಿರಾಡಿ ಘಾಟಿ ಅಲ್ಲದೆ, ಮೈಸೂರು-ಮಡಿಕೇರಿ-ಸಂಪಾಜೆ-ಸುಳ್ಯ-
ಪುತ್ತೂರು ಅಥವಾ ಹಾಸನ-ಮೂಡಿಗೆರೆ-ಚಾರ್ಮಾಡಿ- ಉಜಿರೆ ಮಾರ್ಗಗಳೂ ಸಂಪರ್ಕ ಕಲ್ಪಿ ಸುತ್ತವೆ. ಆದರೆ ಈ ಎರಡೂ ರಸ್ತೆಗಳು ಪ್ರಸ್ತುತ ಇರುವ ಮಾರ್ಗಕ್ಕೆ ಹೋಲಿಸಿದರೆ ಸುಮಾರು 30-40 ಕಿ.ಮೀ. ಹೆಚ್ಚುವರಿ ಆಗುತ್ತದೆ. ಆದರೆ ಅದನ್ನು ಕ್ರಮಿಸಲು ಸುಮಾರು ಒಂದೂವರೆಯಿಂದ ಎರಡು ತಾಸು ಹೆಚ್ಚು ಸಮಯ ಹಿಡಿಯುತ್ತದೆ. ಯಾಕೆಂದರೆ, ತುಂಬಾ ಕಿರಿದಾಗಿದ್ದು, ಘಟ್ಟಪ್ರದೇಶಗಳಲ್ಲಿ ಈ ಮಾರ್ಗಗಳು ಹಾದುಹೋಗುತ್ತವೆ. ತಿರುವುಗಳು ಕೂಡ ತುಂಬಾ ಅಪಾಯಕಾರಿಯಾಗಿವೆ. ಹಾಗಾಗಿ ಅತ್ಯಂತ ನುರಿತ ಚಾಲಕರನ್ನೇ ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ. ಮಳೆಗಾಲದಲ್ಲಂತೂ ಅಕ್ಷರಶಃ ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ನಿತ್ಯ ಉದ್ದೇಶಿತ ಮಾರ್ಗದಲ್ಲಿ 300 ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಇದರಲ್ಲಿ 50 ಬಸ್‌ಗಳುದ್ದು ಪ್ರೀಮಿಯಂ ಸೇವೆಗಳಾಗಿವೆ. ಶಿರಾಡಿ ಘಾಟಿ ಮಾರ್ಗ ಸ್ಥಗಿತಗೊಂಡರೆ ಅನಿವಾರ್ಯವಾಗಿ ಸಂಪಾಜೆ ಅಥವಾ ಚಾರ್ಮಾಡಿ ಮೂಲಕ ಹಾದುಹೋಗಬೇಕಾಗುತ್ತದೆ. ಪರ್ಯಾಯ ಮಾರ್ಗಗಳು ದುರ್ಗಮವಂತೂ ಇವೆ. 2018-19ರಲ್ಲಿ ಸುರಿದ ಭಾರೀ ಮಳೆ ಮತ್ತು ಗುಡ್ಡ ಕುಸಿತದಿಂದ ಅದರ ಅನುಭವ ನಮಗೆಲ್ಲರಿಗೂ ಆಗಿದೆ. ಆದರೆ ಈಗ ಬೇರೆ ದಾರಿಯೂ ಇಲ್ಲ. ಸಮಯ ಮತ್ತು ಹೆಚ್ಚುವರಿ ಕಿ.ಮೀ. ಆಗುತ್ತದೆ. ಅದನ್ನು ಪ್ರಯಾಣಿಕರ ಮೇಲೆ ಹಾಕಲು ಆಗುವುದಿಲ್ಲ. ಸ್ಲೀಪರ್, ನಾನ್‌ ಎಸಿ ಸ್ಲೀಪರ್ ಸೇರಿದಂತೆ ಪ್ರೀಮಿಯಂ ಸೇವೆಗಳ ಪ್ರಯಾಣ ದರದಲ್ಲಂತೂ ವ್ಯತ್ಯಾಸ ಆಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ಮಾಹಿತಿ ನೀಡಿದರು.
ಸಾಮಾನ್ಯವಾಗಿ ಈಗಿರುವ ಮಾರ್ಗದ ಮೂಲಕ 7-8 ತಾಸು ಬೇಕಾಗುತ್ತದೆ. ಚಾರ್ಮಾಡಿ ಅಥವಾ ಸಂಪಾಜೆ ಮೇಲೆ ಹೋಗುವುದಾದರೆ 9-10 ತಾಸು ಕನಿಷ್ಠ ಬೇಕಾಗುತ್ತದೆ. ಅದರಲ್ಲೂ ಈ ಪರ್ಯಾಯ ಮಾರ್ಗಗಳಲ್ಲಿ ಕ್ಯಾಂಟರ್‌ಗಳು ಹೆಚ್ಚಾಗಿ ಓಡಾಡುತ್ತವೆ. ಒಂದು ಬ್ರೇಕ್‌ಡೌನ್‌ ಆದರೂ ರಸ್ತೆ ಜಾಮ್‌ ಆಗಿಬಿಡುತ್ತದೆ. ಈ ಮಧ್ಯೆ ವರ್ಷಗಟ್ಟಲೆ ಕಾರ್ಯಾಚರಣೆ ಮಾಡುವುದಾದರೆ ಅದು ಅಕ್ಷರಶಃ ಸವಾಲಾಗಿದೆ ಎಂದು ಶ್ರೀಸತ್ಯನಾರಾಯಣ ಟ್ರಾವೆಲ್ಸ್‌ ಮಾಲಕ ಕೆ.ಬಿ. ಶುಭಂ ಬೇಸರ ವ್ಯಕ್ತಪಡಿಸುತ್ತಾರೆ.

Advertisement

ಈ ಮಧ್ಯೆ ಶಿರಾಡಿ ಘಾಟಿ ಸಂಪೂರ್ಣ ಸ್ಥಗಿತಗೊಂಡರೆ ಸರಕು ಸಾಗಣೆ ವಾಹನಗಳು ಕೂಡ ಇದೇ ಮಾರ್ಗಗಳಲ್ಲಿ ಹಾದು ಹೋಗಲಿವೆ. ಇದರಿಂದಾಗಿ ಪರ್ಯಾಯ ರಸ್ತೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಮೊದಲೇ ಹೇಳಿದಂತೆ ರಸ್ತೆಗಳ ಅಗಲವೂ ಚಿಕ್ಕದಾಗಿವೆ. ಮತ್ತಷ್ಟು ಸಮಸ್ಯಾತ್ಮಕವಾಗಿ ಪರಿಣಮಿಸಲಿದೆ. ಮಳೆಗಾಲದಲ್ಲಂತೂ ಊಹಿಸಲೂ ಆಗದು. ಆದ್ದರಿಂದ ಕೊನೆಪಕ್ಷ ಸರಕು-ಸಾಗಣೆಗಾಗಿ ಹೆಚ್ಚುವರಿ ರೈಲುಗಳನ್ನು ಕಾರ್ಯಾಚರಣೆ ಮಾಡುವ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಶೃಂಗೇರಿ ಮೂಲಕವೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಮತ್ತೂಂದು ಪರ್ಯಾಯ ಮಾರ್ಗವಿದೆ. ಆದರೆ ಈ ಎರಡೂ ರಸ್ತೆಗಳಿಗಿಂತ ಅದು ಹೆಚ್ಚು ಅಂದರೆ 60-70 ಕಿ.ಮೀ. ಸುತ್ತಿಬಳಸಿ ಬರುವಂತಹದ್ದಾಗಿದೆ. ಇದು ಕೊನೆಯ ಆಯ್ಕೆ ಎಂದೂ ಮತ್ತೂಬ್ಬ ಟ್ರಾವೆಲರ್‌ ಹೇಳುತ್ತಾರೆ.

-300 ನಿತ್ಯ ಕಾರ್ಯಾಚರಣೆ ಮಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳು
-100-150 ಕಾರ್ಯಾಚರಣೆ ಮಾಡುವ ಖಾಸಗಿ ಬಸ್‌ಗಳ ಸಂಖ್ಯೆ
-6 ಸರಕು ಸಾಗಣೆ ರೈಲುಗಳು ಮಂಗಳೂರು-ಹಾಸನ ನಡುವೆ ಸಂಚಾರ
-9 ಪ್ರಯಾಣಿಕರ ರೈಲು (ಮಂಗಳೂರು-ಹಾಸನ)
-ಇನ್ನೂ ಎರಡು ಸರಕು ಅಥವಾ ರೈಲು ಕಾರ್ಯಾಚರಣೆಗೆ ಸಾಮರ್ಥ್ಯ ಇದೆ.

ಇದನ್ನೂ ಓದಿ:
ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?- https://bit.ly/354VPOy
ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next