ಮಹಾನಗರ: ಮಹಾರಾಷ್ಟ್ರದ ನಾಗಪುರ ನಿವಾಸಿ 19ರ ಹರೆಯದ ಯುವಕ ರೋಹನ್ ಅಗರ್ವಾಲ್ ಕೈಯಲ್ಲಿ ಬಿಡಿ ಕಾಸು ಇಲ್ಲದೆ, ಕಾಲ್ನಡಿಗೆಯಲ್ಲಿ ಭಾರತವನ್ನು ಸುತ್ತಾಡಿ ಬಳಿಕ ಬಾಂಗ್ಲಾ ಮತ್ತು ಚೀನ ಮಾರ್ಗವಾಗಿ ಅತ್ಯಂತ ಶೀತಲ ಪ್ರದೇಶವಾದ ರಷ್ಯಾ ದೇಶದ ಸೈಬೀರಿಯಾದ ಒಮಿಯಾಕಾಮ್ ತಲಪುವ ಗುರಿಯೊಂದಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
2020 ಆಗಸ್ಟ್ 25ರಂದು ಉತ್ತರ ಪ್ರದೇಶದ ವಾರಣಾಸಿ ಯಿಂದ ಪಾದಯಾತ್ರೆ ಆರಂಭಿಸಿದ್ದ ರೋಹನ್ ಅಗರ್ವಾಲ್ ಇದುವರೆಗೆ ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ್, ದಿಲ್ಲಿ, ಉತ್ತರಖಂಡ, ಹಿಮಾಚಲ ಪ್ರದೇಶ, ಚಂಡೀಗಢ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗೋವಾ, ಪಾಂಡಿಚೇರಿ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಸಹಿತ 15 ರಾಜ್ಯಗಳನ್ನು ಕ್ರಮಿಸಿ ಶುಕ್ರವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ.
ಈ ಸಂದರ್ಭ ಉದಯವಾಣಿ ಜತೆ ಮಾತನಾಡಿರುವ ರೋಹನ್, “ಮುಂದಿನ ಎರಡು ವರ್ಷಗಳಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಸುತ್ತಾಡುತ್ತೇನೆ. ಬಳಿಕ ದಿಲ್ಲಿಯಿಂದ ಬಾಂಗ್ಲಾ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ, ಚೀನ, ಹಾಂಕಾಂಗ್, ಮಕಾವ್, ಮಂಗೋಲಿಯಾ ಮೂಲಕ ರಷ್ಯಾಕ್ಕೆ ತೆರಳಿ ಅಲ್ಲಿನ ಸೈಬೀರಿಯಾದ ಒಮಿಯಾಕಾಮ್‌ನಲ್ಲಿ ಪಾದಯಾತ್ರೆಯನ್ನು ಕೊನೆ ಗೊಳಿ ಸುವ ಉದ್ದೇಶ ಹೊಂದಿದ್ದೇನೆ. ನಿರ್ದಿಷ್ಟ ಕಾಲಮಿತಿ ಯನ್ನು ಇರಿಸಿಕೊಂಡಿಲ್ಲ. ಆದರೆ ಒಟ್ಟು 6ರಿಂದ 10 ವರ್ಷಗಳ ಅವಧಿಯಲ್ಲಿ ನನ್ನ ಈ ಪರ್ಯಟನೆಯನ್ನು ಪೂರ್ಣಗೊಳಿಸುವ ಗುರಿ ಇರಿಸಿದ್ದೇನೆ’ ಎಂದು ವಿವರಿಸಿದರು.
ಇದನ್ನೂ ಓದಿ:ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ
ಈ ದೇಶ ಪರ್ಯಟನೆ ವೇಳೆ, ವಿವಿಧ ಜನರೊಂದಿಗೆ ಮಾತನಾಡಿ, ಅವರ ಜೀವನ ಕ್ರಮವನ್ನು ತಿಳಿದುಕೊಂಡು ಜ್ಞಾನ ಸಂಪಾದಿಸಿ ಮಾನವತೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು ತನ್ನ ಉದ್ದೇಶ ಎನ್ನುತ್ತಾರೆ ರೋಹನ್. ನಾಗಪುರ ವಿಶ್ವ ವಿದ್ಯಾನಿಲಯದ ಜಿ.ಎಸ್. ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಎಕೊನಾಮಿಕ್ಸ್‌ನ ಬಿಕಾಂ ವಿದ್ಯಾರ್ಥಿಯಾಗಿದ್ದ ರೋಹನ್, 2020- 21ರಲ್ಲಿ ದ್ವಿತೀಯ ಬಿಕಾಂ ತರಗತಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಪಾದಯಾತ್ರೆಯನ್ನು ಕೈಗೊಂಡಿದ್ದರು. ತಂದೆ ರಮೇಶ್ ತಂಪು ಪಾನೀಯ ಅಂಗಡಿ ನಡೆಸುತ್ತಿದ್ದು, ತಾಯಿ ಸೀಮಾ ಗೃಹಿಣಿ. ತಂಗಿ ಕನಕ್ 6ನೇ ತರಗತಿ ಓದುತ್ತಿದ್ದಾರೆ.
ರಸ್ತೆಯೇ ನನ್ನ ವಿಶ್ವ ವಿದ್ಯಾನಿಲಯ
“ದಿನಕ್ಕೆ 20ರಿಂದ 30 ಕಿ.ಮೀ. ಪಾದಯಾತ್ರೆ ಮಾಡುತ್ತಿ ದ್ದೇನೆ. ಅಗತ್ಯ ಬಿದ್ದಾಗ ಕೆಲವೊಮ್ಮೆ ರಸ್ತೆಯಲ್ಲಿ ಹೋಗುವ ಲಾರಿ ಮತ್ತಿತರ ವಾಹನಕ್ಕೆ ಕೈ ತೋರಿಸುತ್ತೇನೆ. ಚಾಲಕ ನಿಲ್ಲಿಸಿದರೆ ಅದರಲ್ಲಿ ಪ್ರಯಾಣಿಸುತ್ತೇನೆ. ಯಾರಿಂದಲೂ ಹಣ ಕೇಳುವುದಿಲ್ಲ. ಊಟ, ತಿಂಡಿಯನ್ನು ಯಾರಾದರೂ ಕೊಟ್ಟಾಗ ಸ್ವೀಕರಿಸುತ್ತೇನೆ. ಊಟ, ತಿಂಡಿಗಾಗಿ ಹಲವು ಬಾರಿ ಹೊಟೇಲ್, ರೆಸ್ಟೊರೆಂಟ್, ಡಾಬಾಗಳಲ್ಲಿ ಕೆಲಸ ಮಾಡಿದ್ದೂ ಇದೆ. ರಾತ್ರಿ ವೇಳೆ ಆಶ್ರಮ, ದೇಗುಲ, ಚರ್ಚ್, ಗುರಕುಲ, ಮಂದಿರ, ಹೊಟೇಲ್, ರೆಸ್ಟೊರೆಂಟ್, ಪೊಲೀಸ್ ಠಾಣೆ ಇತ್ಯಾದಿಯಾಗಿ ಎಲ್ಲೆಂದರಲ್ಲಿ ನಿದ್ರಿಸಿದ್ದೇನೆ. ರಸ್ತೆಯೇ ನನ್ನ ವಿಶ್ವ ವಿದ್ಯಾನಿಲಯ… ಪಾದಯಾತ್ರೆ ಸಂದರ್ಭದಲ್ಲಿ ಸಿಗುವ ಜನರು ಮತ್ತು ಪ್ರಕೃತಿ ನನ್ನ ನೈಸರ್ಗಿಕ ಶಿಕ್ಷಕರು. ಜನರಿಂದ, ಜನರ ಜೀವನದಿಂದ ನಾನು ಪಾಠ ಕಲಿಯುತ್ತಿದ್ದೇನೆ’ ಎನ್ನುತ್ತಾರೆ ರೋಹನ್.