ಬೆಂಗಳೂರು; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬೆಳಗ್ಗೆ ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನತಾದರ್ಶನ ಮತ್ತು ಗ್ರಾಮವಾಸ್ತವ್ಯಕ್ಕಾಗಿ ಯಾದಗಿರಿಯಿಂದ ಎನ್ ಇಕೆಆರ್ ಟಿಸಿ ಬಸ್ ಮೂಲಕ ಪ್ರಯಾಣ ಬೆಳೆಸಿ ಚಂಡರಕಿ ತಲುಪಿದ್ದಾರೆ.
ಸಿಂಗಾರಗೊಂಡ ಸರ್ಕಾರಿ ಬಸ್ ನಲ್ಲಿ ಸಿಎಂ ಕುಮಾರಸ್ವಾಮಿ ಪ್ರಯಾಣ ಬೆಳೆಸಿದ್ದು, ಚಂಡರಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೊದಲಿಗೆ ಜನತಾ ದರ್ಶನಕ್ಕೆ ಅರ್ಜಿ ಸಲ್ಲಿಸಲು ಗ್ರಾಮಸ್ಥರಿಗೆ ಅವಕಾಶ ಕಲ್ಪಿಸಲಾಗಿದೆ.
ಜನತಾ ದರ್ಶನದ ನಂತರ ಕುಮಾರಸ್ವಾಮಿ ಅವರು ಚಂಡರಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮುಖ್ಯಮಂತ್ರಿಗಳು ದಾರಿಯುದ್ದಕ್ಕೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಚಂಡರಕಿಗೆ ತೆರಳುತ್ತಿರುವ ಸಿಎಂ ಕುಮಾರಸ್ವಾಮಿಗೆ ಸಚಿವರಾದ ವೆಂಕಟರಮಣ ನಾಡಗೌಡ, ಶಾಸಕರಾದ ನಾಗನಗೌಡ ಕಂದಕೂರ, ಶರಣಬಸಪ್ಪ ದರ್ಶನಾಪೂರ, ಸಿಎಂ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ, ಜಿಲ್ಲಾಧಿಕಾರಿ ಕೂರ್ಮರಾವ ಹಾಗೂ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಸಾಥ್ ನೀಡಿದ್ದಾರೆ.