Advertisement

“ಗ್ರೇಟ್‌ ಬ್ಯಾರಿಯರ್‌ ರೀಫ್’; ಅಚ್ಚರಿಯ ಜಗತ್ತು ಇದು…

10:10 AM Dec 29, 2020 | Nagendra Trasi |

ಹವಳದ ದಿಬ್ಬಗಳು
“ಗ್ರೇಟ್‌ ಬ್ಯಾರಿಯರ್‌ ರೀಫ್’ ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ ಸಲುವಾಗಿ ಆ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ನಿಷೇಧಿಸಲಾಗಿದೆ. ಈ ಭಾಗದಲ್ಲಿ 1,500ಕ್ಕೂ ಹೆಚ್ಚು ಮೀನಿನ ಪ್ರಭೇದಗಳಿದ್ದು, 215 ಜಾತಿಯ ಪಕ್ಷಿಗಳು ವಾಸವಾಗಿವೆ. ಈ ಎಲ್ಲ ಕಾರಣದಿಂದಲೂ ಜಗತ್ತಿನ ಏಳು ನೈಸರ್ಗಿಕ ಅದ್ಭುತಗಳಲ್ಲಿ ಬ್ಯಾರಿಯರ್‌ ರೀಫ್ಗೂ ಸ್ಥಾನ ಸಿಕ್ಕಿದೆ. ಅಲ್ಲಿನ ವೈವಿಧ್ಯಮಯ ಜೀವ ಸಂಕುಲವನ್ನು ಮನಗಂಡು 1981ರಲ್ಲಿ ಅದನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. “ಗ್ರೇಟ್‌ ಬ್ಯಾರಿಯರ್‌ ರೀಫ‌ನ್ನು’ ಬಾಹ್ಯಾಕಾಶದಿಂದಲೂ ಕಾಣಬಹುದು. ಸಾವಿರಾರು ಕಿ.ಮೀ ಉದ್ದದ ಈ ರಚನೆಯನ್ನು ಸೂಕ್ಷ್ಮ ಜೀವಿಗಳು ನಿರ್ಮಿಸಿದ್ದು ಎನ್ನುವುದು ಅಚ್ಚರಿಯೇ ಸರಿ. ಕೆಲ ನೈಸರ್ಗಿಕ ಕಾರಣಗಳು ಮತ್ತು ಮಾನವರ ದುರಾಸೆಯಿಂದಾಗಿ ಈ ಹವಳದ ದಿಬ್ಬಗಳಿಗೆ ಆಪತ್ತು ಒದಗಿದೆ.

Advertisement

ಗೋಡೆ ಏರುವ ಆಡು
ಸಣ್ಣಪುಟ್ಟ ಕೀಟಗಳು ಅಥವಾ ಹಾವುಗಳಂಥ ಸರೀಸೃಪಗಳು ಜಾರುವ ಅಥವಾ ಉದ್ದವಾದ ಗೋಡೆಯನ್ನು ಏರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇ ರೀತಿ ಕೆಲವು ಪ್ರಾಣಿಗಳು ಮರಗಳನ್ನು ಸಲೀಸಾಗಿ ಏರುತ್ತವೆ. ಆದರೆ ಯಾವತ್ತಾದರೂ ಆಡು ಗೋಡೆ ಹತ್ತುವುದನ್ನು ನೋಡಿದ್ದೀರಾ? ಇಟಲಿಯ ಉತ್ತರ ಭಾಗದಲ್ಲಿರುವ ಕೆಲವು ಅಣೆಕಟ್ಟುಗಳ ಬಳಿ ಆಲ್ಪೆ„ನ್‌ ಐಬೆಕ್ಸ್ ಎಂಬ ಪ್ರಭೇದಕ್ಕೆ ಸೇರಿದ ಆಡುಗಳಿವೆ. ಅವು ಸುಮಾರು 160 ಮೀ ಎತ್ತರಕ್ಕಿರುವ ತಡೆಗೋಡೆಯನ್ನು ಯಾವುದೇ ಸಹಾಯವಿಲ್ಲದೆ ಏರಬಲ್ಲವು. ಆಣೆಕಟ್ಟನ್ನು ಕಟ್ಟಿರುವ ಕಲ್ಲುಗಳಲ್ಲಿ ಸಂದುಗಳಲ್ಲಿ ಖನಿಜಯುಕ್ತ ಉಪ್ಪು, ಹುಲ್ಲುಗಳಿರುತ್ತವೆ. ಅದನ್ನು ತಿನ್ನಲು ಅವು ಆ ರೀತಿ ಹತ್ತುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಈ ಖನಿಜಯುಕ್ತ ಉಪ್ಪು ಅವುಗಳ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿರುವುದರಿಂದ ಅವುಗಳನ್ನು ಅರಸಿ ಹೊರಡುವ ಆಡುಗಳ ಗುಂಪು ಅದೆಷ್ಟೇ ದೊಡ್ಡ ಗೋಡೆಯಿದ್ದರೂ ಅದನ್ನು ಸುಲಭವಾಗಿ ಏರುತ್ತದೆ. ಅವುಗಳ ಕಾಲಿನ ಗೊರಸುಗಳಲ್ಲಿರುವ ರಬ್ಬರಿನಂತಹ ಅಂಶವು ಆಡುಗಳು ಕೆಳಕ್ಕೆ ಬೀಳದಂತೆ ತಡೆಯುತ್ತವೆ.

ಬೆಳೆಯುವ ಕಲ್ಲುಗಳು
ರಷ್ಯಾ, ರೊಮೆನಿಯಾ ಹಾಗೂ ಜೆಕ್‌ ಗಣರಾಜ್ಯಗಳಲ್ಲಿ ಕಾಣಸಿಗುವ “ಟ್ರೋವಂಟ್ಸ್‌’ ಎಂಬ ಕಲ್ಲುಗಳು ವಿಸ್ಮಯಕಾರಿಯಾಗಿವೆ. ಈ ಕಲ್ಲುಗಳ ವಿಚಿತ್ರ ಸಂಗತಿ ಏನೆಂದರೆ ಮಳೆ ಬಂದ ಕೆಲ ದಿನಗಳ ನಂತರ ಆ ನೀರನ್ನು ಹೀರಿಕೊಂಡು ಕಲ್ಲುಗಳು ಬೆಳೆಯುತ್ತಾ ಹೋಗುತ್ತವೆ ಮತ್ತು ಇನ್ನೊಂದು ಕಲ್ಲನ್ನು ಸೃಷ್ಟಿಸುತ್ತವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಮಳೆಯ ನಂತರ ಮಣ್ಣಿನೊಳಗೆ ನಡೆಯುವ ರಾಸಾಯನಿಕ ಕ್ರಿಯೆಗಳಿಂದಾಗಿ ಈ ಕಲ್ಲುಗಳು ಹೀಗೆ ಬೆಳೆಯುತ್ತವೆ ಎಂಬುದು ವಿಜ್ಞಾನಿಗಳ ಅಂಬೋಣ. ಈ ಕಲ್ಲುಗಳು ಸುಮಾರು 6 ಮಿಲಿಯನ್‌ ವರ್ಷಗಳ ಹಿಂದೆ ಉಂಟಾದ ಭೂಕಂಪದ ಪರಿಣಾಮವಾಗಿ ಹುಟ್ಟಿಕೊಂಡವು ಎನ್ನಲಾಗಿದೆ. ಇವು ಒಂದು ನಿರ್ದಿಷ್ಟ ಆಕಾರದಲ್ಲಿ ಬೆಳೆಯದೆ ಉದ್ದ, ಲಂಬ, ಓರೆ, ಸಿಲಿಂಡರ್‌ ಆಕೃತಿ, ಚೌಕಾಕೃತಿ, ಒಂದರ ಮೇಲೆ ಒಂದು ಕಲ್ಲುಗಳನ್ನು ಇಟ್ಟಂತೆ ಬೆಳೆಯುವುದು- ಇವೆಲ್ಲಾ ಮತ್ತೂಂದು ವಿಶೇಷ. ಈ ಕಲ್ಲುಗಳು ಕನಿಷ್ಟ 5 ಮೀ ನಿಂದ ಗರಿಷ್ಟ 10 ಮೀ.ವರೆಗೂ ಬೆಳೆಯುತ್ತವಂತೆ. ಸದ್ಯ ಈ ಕಲ್ಲುಗಳನ್ನು ವಿಶ್ವ ಪಾರಂಪರಿಕಾ ತಾಣವಾಗಿ ಯುನೆಸ್ಕೊ ಘೋಷಿಸಿದ್ದು ಈ ವಿಸ್ಮಯ ತಾಣಕ್ಕೆ ಪ್ರವಾಸಿಗರು ಹೇರಳವಾಗಿ ಬರುತ್ತಾರೆ.

Advertisement

– ಪುರುಷೋತ್ತಮ್‌ ವೆಂಕಿ

Advertisement

Udayavani is now on Telegram. Click here to join our channel and stay updated with the latest news.

Next