Advertisement

ಸೈಕಲ್‌ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಪ್ರವಾಸ

10:32 AM Jul 23, 2018 | |

ಗುರುಪುರ: ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತಗೊಂಡ ಗುರುಪುರದ ಯುವಕನೋರ್ವ ಈ ಅಭಿಯಾನವನ್ನು ಇನ್ನಷ್ಟು ಚೆನ್ನಾಗಿ ಕಾರ್ಯಗತಗೊಳಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರವಾಸ ಕೈಗೊಂಡಿದ್ದಾರೆ. ಜಿ.ರಾಜೇಂದ್ರ ಹಾಗೂ ಕಲಾವತಿಯವರ ಪುತ್ರ ಶ್ರವಣ್‌ ಕುಮಾರ್‌ ಜಿ. ಎಂಬವರೇ ಈ ಸಾಧನೆ ಮಾಡುತ್ತಿರುವ ಯುವಕ.

Advertisement

ಸೈಕಲಿಗೆ ಭಾರತದ ಧ್ವಜ ಅಳವಡಿಸಿ ದೇಶ ಸುತ್ತುವ ಕಾಯಕದಲ್ಲಿ ತೊಡಗಿದ್ದಾರೆ. ಮೇ 3ರಂದು ಕಾಶ್ಮೀರದಿಂದ ಪ್ರವಾಸ ಆರಂಭಿಸಿರುವ ಇವರು ಈಗಾಗಲೇ ಹಿಮಾಚಲ, ಸಿಮ್ಲಾ, ಲಡಾಕ್‌, ಕಾರ್ಗಿಲ್‌, ಕಾಶ್ಮೀರ, ಜಮ್ಮು, ಉತ್ತರಾಖಂಡ, ಪಂಜಾಬ್‌ನಲ್ಲಿ ಪ್ರವಾಸ ಮುಗಿಸಿ ಈಗ ಉತ್ತರ ಪ್ರದೇಶದ ಲಕ್ನೋ ಮುಂತಾದ ಕಡೆಗೆ ತೆರಳಿ ಗುಜರಾತ್‌, ರಾಜಸ್ತಾನ, ಮುಂಬಯಿ, ಗೋವಾ, ಮಂಗಳೂರು, ಬೆಂಗಳೂರು, ಹೈದರಾಬಾದ್‌, ವಿಶಾಖಪಟ್ಟಣ, ಚೆನ್ನೈ, ತಿರುವನಂತಪುರಂ ಮೂಲಕ ಕನ್ಯಾಕುಮಾರಿಗೆ ತೆರಳಲಿದ್ದಾರೆ.

ದೇವಸ್ಥಾನ, ಆಶ್ರಮದಲ್ಲಿ ಆಶ್ರಯ
ಪರ್ಯಟನೆ ನಡೆಸಲು ಹಣಕಾಸು ಅಡಚಣೆ ಇರುವುದರಿಂದ ದೇವಸ್ಥಾನ, ಆಶ್ರಮ, ಆರೆಸ್ಸೆಸ್‌, ಬಿಜೆಪಿ ಕಚೇರಿಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಸ್ವಚ್ಛ ಭಾರತದ ಸಾಕಾರ, ರಾಷ್ಟ್ರೀಯತೆ ಜಾಗೃತಿ ಮೂಡಿಸಲು ಯಾವ ಕಷ್ಟವನ್ನೂ ಸಹಿಸುತ್ತೇನೆ ಎನ್ನುವುದು ಶ್ರವಣ್‌ ಅವರ ಅಭಿಮತ. ನಿರ್ಜನ ಪ್ರದೇಶ ಸಿಗುವಾಗ ಸಮೀಪದ ಹಳ್ಳಿಗಳಲ್ಲಿ ಟೆಂಟ್‌ ಅಳವಡಿಸಿ ವಾಸ್ತವ್ಯ ಹೂಡುತ್ತಾರೆ.

ಸಿಮ್ಲಾದಲ್ಲಿ ಪ್ರವಾಸದಲ್ಲಿದ್ದ ಸಂದರ್ಭ ಇವರ ಸೈಕಲ್‌ ಕೆಟ್ಟುಹೋಗಿತ್ತು. ಆಗ ಇಂದೋರ್‌ನ ಯುವಕನೊಬ್ಬ ಹೊಸ ಸೈಕಲ್‌ ನೀಡಿ ಪ್ರೋತ್ಸಾಹ ನೀಡಿದ್ದ. ಶ್ರವಣ್‌ ಅವರ ಏಕಾಂಗಿ ಸಾಧನೆ ಕಂಡು ಎಲ್ಲರೂ ನಿಬ್ಬೆರಗಾಗುತ್ತಿದ್ದಾರೆ. ಇನ್ನೂ ಹಲವಾರು ರಾಜ್ಯಗಳ ಪ್ರವಾಸ ಕೈಗೊಂಡು ಕನ್ಯಾಕುಮಾರಿ ತಲುಪುವ ತನಕ ಸೈಕಲ್‌ ಯಾತ್ರೆ ನಡೆಯಲಿದೆ.

ಸಾಧನೆ ಬಗ್ಗೆ ಹೆಮ್ಮೆ ಇದೆ
‘ದೇಶಕ್ಕಾಗಿ ನನ್ನ ಮಗ ಈ ಸಾಧನೆ ಮಾಡುವುದರಿಂದ ಅವನ ಬಗ್ಗೆ ನನಗೆ ಹೆಮ್ಮೆ ಇದೆ. ಆರಂಭದಲ್ಲಿ ಮಗ ಏಕಾಂಗಿಯಾಗಿ ಸೈಕಲ್‌ ಪರ್ಯಟನೆ ಮಾಡುತ್ತಾನೆ ಎಂದಾಗ ಭಯ ಕಾಡಿತ್ತು. ಆದರೆ ಆತ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲಬಲ್ಲ ಛಲ ಹೊಂದಿದ್ದಾನೆ.
– ಜಿ. ರಾಜೇಂದ್ರ, ತಂದೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next